ಐದು ಹುಲಿಗಳ ಸಾವು ಹಾಗೂ ಚರಿತ್ರೆಯಲ್ಲಿ ಹುಲಿ ದುರಂತ ದಾಖಲೆಗಳು
ಇಡೀ ವಿಶ್ವವೇ ನೆನಪಿಡುವ ದೊಡ್ಡ ವನ್ಯಜೀವಿ ದುರಂತ ರಾಜ್ಯದಲ್ಲಿ ಘಟಿಸಿದೆ. ಚಾಮರಾಜ ನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯ ಜೀವಿ ವಲಯದಲ್ಲಿ ನಾಲ್ಕು ಮರಿ ಹಾಗೂ ಒಂದು ತಾಯಿ ಹುಲಿ ಸೇರಿದಂತೆ ಒಟ್ಟೂ ಐದು ಹುಲಿಗಳು ಸಾವನ್ನಪ್ಪಿವೆ. ಲಭ್ಯ ದಾಖಲೆ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಒಂದೇ ದಿನ ಒಂದೇ ಸ್ಥಳದಲ್ಲಿ ಸಾವನ್ನಪ್ಪಿದ ಅತಿ ಹೆಚ್ಚು ಹುಲಿಗಳ ಸಾವು ಇದಾಗಿದೆ. ವಿಷ ಸೇವಿಸಿ ಈ ಸಾವು ನಡೆದಿದೆಯೆಂದು ಹೇಳಲಾಗಿದೆ, ಸನಿಹದಲ್ಲಿ ಹಸುವೊಂದು ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ, ತನಿಖೆ ನಡೆದಿದೆ. ಮರಿ ಹಾಕಿದ ಹುಲಿಗಳು ಏಳೆಂಟು ವಾರಗಳ ಕಾಲ ಮರಿಯನ್ನು ಜೊತೆಗೆ ಒಯ್ದು ಬೇಟೆ ಆಹಾರ ಒದಗಿಸುತ್ತವೆ. ಇದಲ್ಲದೇ ಮರಿಗಳಿಗೆ ಬೇಟೆ ಕಲಿಸುವ ಕಾರಣಕ್ಕೆ ಹೆಚ್ಚು ಬೇಟೆಯಾಡುತ್ತವೆ. ಇಂಥ ಸಂದರ್ಭದಲ್ಲಿ ಮರಿಗಳ ರಕ್ಷಣೆಗೆ ಇವುಗಳು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ಇರುತ್ತವೆ. ಜಾಗ ಬದಲಿಸುವಾಗ ಕಚ್ಚಾ ಮಣ್ಣಿನ ರಸ್ತೆಯಲ್ಲಿ ಕಾಡಿನ ಇನ್ನೊಂದು ಪ್ರದೇಶಕ್ಕೆ ಮರಿಗಳ ಜೊತೆಗೆ ಸಂಚರಿಸುವ ಹೆಜ್ಜೆ ಗುರುತುಗಳು ಕಾಣುತ್ತವೆ. ಕಾಟಿ, ಹಂದಿ, ಜಿಂಕೆಗಳ ಸಾಂದ್ರತೆ ಕಡಿಮೆ ಇದ್ದರೆ ಸುತ್ತಲಿನ ದನಕರು ಹಿಡಿಯುವುದು ಸಹಜವಾಗಿದೆ. ಕಾಡಿಗೆ ಮೇಯಲು ಹೋದ ದನಕರುಗಳ ನಿರಂತರ ಸಾವು ಘಟನೆಗೆ ಕಾರಣವೇ? ಹುಲಿ ಸಾವಿನ ಘಟನೆಯನ್ನು ಈ ಹಿನ್ನಲೆಯಲ್ಲಿ ಕೂಡಾ ತನಿಖೆಗೆ ಒಳಪಡಿಸುವ ಅಗತ್ಯವಿದೆ. ವನ್ಯ ಜೀವಿ ಹಾಗೂ ಕೃಷಿ/ಜ...