ಖಾಸಗಿ ಶಾಲೆಗಳ ಡೊನೇಷನ್ ದಂಧೆ ವಿರುದ್ಧ SIT ತನಿಖೆಗೆ ಆಗ್ರಹ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ HRJC ಬೃಹತ್ ಸಾರ್ವಜನಿಕ ಹಿತರಕ್ಷಣಾ ದೂರು


ಶಿವಮೊಗ್ಗ, ಜೂನ್ 10:
ರಾಜ್ಯದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ನಡೆಯುತ್ತಿದೆ ಎನ್ನಲಾದ ಕಾನೂನುಬಾಹಿರ ಡೊನೇಷನ್ ದಂಧೆ ಹಾಗೂ ವಿವಿಧ ಹೆಸರಿನಲ್ಲಿ ಶುಲ್ಕ ಸುಲಿಗೆ ವಿರುದ್ಧ ವಿಶೇಷ ತನಿಖಾ ದಳ (SIT) ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಮಾನವ ಹಕ್ಕುಗಳ ನ್ಯಾಯ ಮಂಡಳಿ (HRJC) ಆಗ್ರಹಿಸಿದೆ.

ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಬೃಹತ್ ಸಾರ್ವಜನಿಕ ಹಿತರಕ್ಷಣಾ ದೂರು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ HRJC ಕರ್ನಾಟಕ ರಾಜ್ಯ ಉಪಾಧ್ಯಕ್ಷ ಎನ್.ಎಂ. ಸಿಬ್ಗತ್ ಉಲ್ಲಾ, ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿ ಪೋಷಕರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿವೆ ಎಂದು ಆರೋಪಿಸಿದರು.

"ಪ್ರವೇಶಾತಿ ಸಂದರ್ಭದಲ್ಲಿ ಯಾವುದೇ ರಶೀದಿ ನೀಡದೆ ಲಕ್ಷಾಂತರ ರೂಪಾಯಿಗಳನ್ನು ಡೊನೇಷನ್ ರೂಪದಲ್ಲಿ ವಸೂಲಿ ಮಾಡಲಾಗುತ್ತಿದೆ. ಕಟ್ಟಡ ಅಭಿವೃದ್ಧಿ ಶುಲ್ಕ, ಸ್ಮಾರ್ಟ್ ಕ್ಲಾಸ್ ಶುಲ್ಕ, ಪಠ್ಯಪುಸ್ತಕ ಹಾಗೂ ಸಮವಸ್ತ್ರ ಶುಲ್ಕ ಸೇರಿದಂತೆ ವಿವಿಧ ಹೆಸರಿನಲ್ಲಿ ಪೋಷಕರಿಂದ ಅನಧಿಕೃತ ಹಣ ಸಂಗ್ರಹಿಸಲಾಗುತ್ತಿದೆ. ಮಕ್ಕಳ ಭವಿಷ್ಯಕ್ಕಾಗಿ ಹೆತ್ತವರು ಸಾಲ ಮಾಡಿ, ಒಡವೆ ಅಡವಿಟ್ಟು ಹಣ ಪಾವತಿಸುವ ದುಸ್ಥಿತಿ ನಿರ್ಮಾಣವಾಗಿದೆ," ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರಮುಖ ಆಗ್ರಹಗಳು

HRJC ವತಿಯಿಂದ ಸರ್ಕಾರಕ್ಕೆ ಸಲ್ಲಿಸಲಾದ ಮನವಿಯಲ್ಲಿ ಕೆಳಕಂಡ ಬೇಡಿಕೆಗಳನ್ನು ಮುಂದಿರಿಸಲಾಗಿದೆ:

  • ಖಾಸಗಿ ಶಾಲೆಗಳ ವಿರುದ್ಧ ಪೋಷಕರು ಮುಕ್ತವಾಗಿ ದೂರು ದಾಖಲಿಸಲು ಜಿಲ್ಲಾ ಮಟ್ಟದಲ್ಲಿ ಅಧಿಕೃತ ದೂರು ಸಹಾಯವಾಣಿ ಕೇಂದ್ರ ಸ್ಥಾಪಿಸಬೇಕು.
  • ಅನಧಿಕೃತ ಶುಲ್ಕ ವಸೂಲಿ ಹಾಗೂ ಡೊನೇಷನ್ ದಂಧೆಯ ಸಮಗ್ರ ತನಿಖೆಗೆ ವಿಶೇಷ ತನಿಖಾ ದಳ (SIT) ರಚಿಸಬೇಕು.
  • ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPI) ತಕ್ಷಣ ತನಿಖೆ ನಡೆಸಿ ವರದಿ ಸಲ್ಲಿಸಬೇಕು.

ಕಾನೂನು ಉಲ್ಲಂಘನೆ ಆರೋಪ

HRJC ಪ್ರಕಾರ, ಶಿಕ್ಷಣ ಸಂಸ್ಥೆಗಳು RTE ಕಾಯ್ದೆ-2009ರ ಸೆಕ್ಷನ್ 13 ಅನ್ನು ಉಲ್ಲಂಘಿಸುತ್ತಿದ್ದು, ಪ್ರವೇಶಾತಿ ವೇಳೆ ಕ್ಯಾಪಿಟೇಷನ್ ಫೀಸ್ ಅಥವಾ ಡೊನೇಷನ್ ಪಡೆಯುವುದನ್ನು ಕಾನೂನು ನಿಷೇಧಿಸಿದೆ. ನಿಯಮ ಉಲ್ಲಂಘಿಸಿದಲ್ಲಿ ಪಡೆದ ಮೊತ್ತದ ಹತ್ತು ಪಟ್ಟು ದಂಡ ವಿಧಿಸಲು ಅವಕಾಶವಿದೆ ಎಂದು ತಿಳಿಸಲಾಗಿದೆ.

ಅದೇ ರೀತಿ, ಕರ್ನಾಟಕ ಶಿಕ್ಷಣ ಕಾಯ್ದೆ-1983 ಪ್ರಕಾರ ಸರ್ಕಾರದ ಮಾರ್ಗಸೂಚಿಗಳನ್ನು ಮೀರಿ ಖಾಸಗಿ ಶಾಲೆಗಳು ಮನಬಂದಂತೆ ಶುಲ್ಕ ಹೆಚ್ಚಿಸಲು ಅವಕಾಶವಿಲ್ಲ. ಅನಧಿಕೃತ ಶುಲ್ಕ ವಸೂಲಾತಿ ಗಂಭೀರ ಅಪರಾಧವಾಗಿದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.

ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲೆಯಾದ್ಯಂತ ಪೋಷಕರನ್ನು ಸಂಘಟಿಸಿ ಬೃಹತ್ ಸಾರ್ವಜನಿಕ ಹೋರಾಟ ನಡೆಸಲಾಗುವುದು ಎಂದು HRJC ಎಚ್ಚರಿಕೆ ನೀಡಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ HRJC ಕರ್ನಾಟಕ ರಾಜ್ಯ ಉಪಾಧ್ಯಕ್ಷ ಎನ್.ಎಂ. ಸಿಬ್ಗತ್ ಉಲ್ಲಾ, ಪದಾಧಿಕಾರಿಗಳಾದ ಲೋಕೇಶ್, ದೇವರಾಜ್ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ