Prof. ಕೆ. ಎಸ್. ಭಗವಾನ್ ವಿರುದ್ಧ ಕಾನೂನು ಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ
ಶಿವಮೊಗ್ಗ , ಜೂನ್ 16: ಪ್ರಾಧ್ಯಾಪಕ ಕೆ. ಎಸ್. ಭಗವಾನ್ ಅವರು ಹಿಂದೂ ಧರ್ಮ, ಶ್ರೀರಾಮ ಹಾಗೂ ಹಿಂದೂ ದೇವತೆಗಳ ಕುರಿತು ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿಯು ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದೆ.
ಸಮಿತಿಯು ನೀಡಿರುವ ಪತ್ರದಲ್ಲಿ, ಜೂನ್ 9, 2026ರಂದು ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಬಿ. ಕೃಷ್ಣಪ್ಪ ಮೈತ್ರಿವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಪ್ರೊ. ಬಿ. ಕೃಷ್ಣಪ್ಪ ಜಯಂತಿ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೊ. ಕೆ. ಎಸ್. ಭಗವಾನ್ ಅವರು ಸಾರ್ವಜನಿಕ ಭಾಷಣದಲ್ಲಿ ಹಿಂದೂ ಧರ್ಮದ ನಂಬಿಕೆಗಳು, ಧಾರ್ಮಿಕ ಆಚರಣೆಗಳು ಮತ್ತು ಶ್ರೀರಾಮನ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವುದಾಗಿ ಆರೋಪಿಸಲಾಗಿದೆ.
ಈ ಹೇಳಿಕೆಗಳು ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದು, ಸಮಾಜದಲ್ಲಿ ಉದ್ವಿಗ್ನತೆ ಮತ್ತು ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪ್ರೊ. ಕೆ. ಎಸ್. ಭಗವಾನ್ ಅವರು ಈ ಹಿಂದೆಯೂ ಶ್ರೀರಾಮ, ಶ್ರೀಕೃಷ್ಣ, ಭಗವದ್ಗೀತೆ ಹಾಗೂ ಹಿಂದೂ ಧರ್ಮಗ್ರಂಥಗಳ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ವಿವಿಧೆಡೆ ಅವರ ವಿರುದ್ಧ ದೂರುಗಳು ದಾಖಲಾಗಿದ್ದರೂ, ಇದೇ ರೀತಿಯ ಹೇಳಿಕೆಗಳನ್ನು ಅವರು ಪುನರಾವರ್ತಿಸುತ್ತಿದ್ದಾರೆ ಎಂದು ಹಿಂದೂ ಜನಜಾಗೃತಿ ಸಮಿತಿಯು ಆರೋಪಿಸಿದೆ.
ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದ್ದರೂ, ಯಾವುದೇ ಧರ್ಮ, ದೇವರು ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಹೇಳನ ಮಾಡುವ ಹಕ್ಕನ್ನು ನೀಡಿಲ್ಲ. ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಅಪಾಯವನ್ನುಂಟು ಮಾಡಬಹುದು ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.
ಆದ್ದರಿಂದ, ಹರಿಹರ ಕಾರ್ಯಕ್ರಮದಲ್ಲಿ ಪ್ರೊ. ಕೆ. ಎಸ್. ಭಗವಾನ್ ಅವರು ಮಾಡಿದ ಸಂಪೂರ್ಣ ಭಾಷಣದ ವಿಡಿಯೊ, ಆಡಿಯೊ ದಾಖಲೆಗಳು ಹಾಗೂ ಇತರ ಸಾಕ್ಷ್ಯಗಳನ್ನು ಪರಿಶೀಲಿಸಿ, ಅನ್ವಯಿಸುವ ಕಾನೂನು ವಿಧಿಗಳಡಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ