ಶರಾವತಿ ಪಿಎಸ್‌ಪಿ ಯೋಜನೆ ಕುರಿತು CEC ಸದಸ್ಯರೊಂದಿಗೆ ಪರಿಸರ ಸಂರಕ್ಷಣೆ ಹೋರಾಟಗಾರರು ಮಹತ್ವದ ಸಭೆ

 


ಶಿವಮೊಗ್ಗ, ಜೂನ್ 2: ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ (PSP) ಕುರಿತು ಉದ್ಭವಿಸಿರುವ ವಿವಿಧ ವಿವಾದಗಳು ಮತ್ತು ಸಾರ್ವಜನಿಕ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ, ಕೇಂದ್ರ ಸಬಲೀಕೃತ ಸಮಿತಿ (Central Empowered Committee - CEC) ಸದಸ್ಯರಾದ ಸುನಿಲ್ ಲಮಾಯ್ ಅವರನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗ ಹಾಗೂ "ಪರಿಸರಕ್ಕಾಗಿ ನಾವು" ಸಂಘಟನೆಯ ಪ್ರತಿನಿಧಿಗಳು ಇಂದು ಭೇಟಿಯಾಗಿ ಮನವಿ ಸಲ್ಲಿಸಿದರು.

ಸಭೆಯಲ್ಲಿ ಮಾತನಾಡಿದ CEC ಸದಸ್ಯ ಸುನಿಲ್ ಲಮಾಯ್ ಅವರು, ಶರಾವತಿ ಪಿಎಸ್‌ಪಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಅಥವಾ ಸಭೆ ನಡೆಸಲು ತಮಗೆ ಭಾರತದ ಸುಪ್ರೀಂ ಕೋರ್ಟ್ ಯಾವುದೇ ನೇರ ನಿರ್ದೇಶನ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ ಅವರು, ಶರಾವತಿ ಪಿಎಸ್‌ಪಿ ಯೋಜನೆ ವಿರುದ್ಧ ಸುಮಾರು 75 ಸಾವಿರ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿ, ಈ ಕುರಿತು CEC ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುನಿಲ್ ಲಮಾಯ್ ಅವರು, ಇಷ್ಟೊಂದು ಸಂಖ್ಯೆಯ ಆಕ್ಷೇಪಣೆಗಳು ತಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದರು. ಈ ವೇಳೆ ಸಭೆಯಲ್ಲಿ ಉಪಸ್ಥಿತರಿದ್ದ KPC ಅಧಿಕಾರಿಗಳಿಂದ ಸ್ಪಷ್ಟನೆ ಕೇಳಿದಾಗ ಅವರು ಯಾವುದೇ ಉತ್ತರ ನೀಡದೆ ಮೌನ ವಹಿಸಿದರು ಎಂದು ತಿಳಿದುಬಂದಿದೆ.

ಸಭೆಯಲ್ಲಿ ಭಾಗವಹಿಸಿದ್ದ ಕೆ.ಇ. ಕಾಂತೇಶ್ ಅವರು, ಯೋಜನೆಯ ಡಿಪಿಆರ್ (Detailed Project Report) ಅನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದರೂ ನೀಡಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ CEC ಸದಸ್ಯರು, ಈ ವಿಷಯದಲ್ಲಿ KPC ಅಧಿಕಾರಿಗಳು ತಪ್ಪು ಎಸಗಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು ಎನ್ನಲಾಗಿದೆ.

ಇದೇ ವೇಳೆ, ಕೇಂದ್ರ ಸರ್ಕಾರದ ಅಗತ್ಯ ಅನುಮತಿಗಳು ದೊರೆಯುವ ಮುನ್ನವೇ ಶರಾವತಿ ಪಿಎಸ್‌ಪಿ ಯೋಜನೆಗೆ ಸುಮಾರು ₹10,000 ಕೋಟಿ ಮೊತ್ತದ ಟೆಂಡರ್ ಆಹ್ವಾನಿಸಲಾಗಿದೆ ಎಂದು ಕೆ.ಎಸ್. ಈಶ್ವರಪ್ಪ ಅವರು ಪ್ರಸ್ತಾಪಿಸಿದರು. ಈ ಕುರಿತು ಪ್ರತಿಕ್ರಿಯಿಸಿದ CEC ಸದಸ್ಯರು, ಈ ವಿಷಯವೂ ಕಾನೂನು ಉಲ್ಲಂಘನೆಯ ವ್ಯಾಪ್ತಿಗೆ ಬರಬಹುದಾದ ಗಂಭೀರ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟರು ಎಂದು ಸಭೆಯಲ್ಲಿ ತಿಳಿಸಲಾಯಿತು.

ಸಭೆಯ ಅಂತ್ಯದಲ್ಲಿ, ಪ್ರಸ್ತಾಪಿಸಲಾದ ಎಲ್ಲ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಅವುಗಳನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರಲಾಗುವುದು ಎಂದು CEC ಸದಸ್ಯರು ಭರವಸೆ ನೀಡಿದರು.

ಸಭೆಯಲ್ಲಿ ಶರಾವತಿ ಪಿಎಸ್‌ಪಿ ಯೋಜನೆ ಕುರಿತು CEC ಸದಸ್ಯರೊಂದಿಗೆ ಪರಿಸರ ಸಂರಕ್ಷಣೆ ಹೋರಾಟಗಾರರು ಶ್ರೀಕಾಂತ್, ಶೇಖರ್ ಗೌಲೇರ, ಜನಾರ್ಧನ್ ಪೈ, ಸುಬ್ಬಣ್ಣ, ಮಹಾದೇವ ಸ್ವಾಮಿ, ಅಶೋಕ್ ಕುಮಾರ್, ವಿ. ರಾಜು, ದಿಲೀಪ್ ನಾಡಿಗ, ರವೀಂದ್ರ, ಎ.ಕೆ. ಚಂದ್ರಪ್ಪ, ಹರ್ಷ, ಪರಿಸರ ರಮೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಶರಾವತಿ ಪಿಎಸ್‌ಪಿ ಯೋಜನೆ ಕುರಿತಂತೆ ಪರಿಸರ, ಕಾನೂನು ಹಾಗೂ ಸಾರ್ವಜನಿಕ ಹಿತಾಸಕ್ತಿ ಸಂಬಂಧಿತ ಪ್ರಶ್ನೆಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಈ ಬೆಳವಣಿಗೆಗಳು ಮಹತ್ವ ಪಡೆದುಕೊಳ್ಳುವ ಸಾಧ್ಯತೆ ಇದೆ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ