ವಾಲಕೇಶಪುರ ಗ್ರಾಮದ ವಾಡಿಕೆ ರಸ್ತೆ ದುರಸ್ತಿಗೆ ಅಡ್ಡಿ: ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರಿಂದ, ಮಹಿಳೆಯರಿಂದ, ಮಕ್ಕಳಿಂದ ಮನವಿ

 


ಶಿವಮೊಗ್ಗ, ಜೂನ್ 15: ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಹೋಬಳಿಯ ವಾಲಕೇಶಪುರ ಗ್ರಾಮದ ಪ್ರಮುಖ ವಾಡಿಕೆ ರಸ್ತೆಯನ್ನು ದುರಸ್ತಿಗೊಳಿಸಲು ಕೆಲವರು ಅಡ್ಡಿಪಡಿಸುತ್ತಿರುವುದಾಗಿ ಆರೋಪಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಗ್ರಾಮಸ್ಥರ ಮಾಹಿತಿ ಪ್ರಕಾರ, ವಾಲಕೇಶಪುರವು ಸ್ವಾತಂತ್ರ್ಯ ಪೂರ್ವದಿಂದಲೂ ಅಸ್ತಿತ್ವದಲ್ಲಿರುವ ಗ್ರಾಮವಾಗಿದ್ದು, ಸುಮಾರು 15 ವರ್ಷಗಳ ಹಿಂದೆ ಕಂದಾಯ ಗ್ರಾಮವಾಗಿ ಘೋಷಿಸಲ್ಪಟ್ಟಿದೆ. ಕಳೆದ ಸುಮಾರು 80 ವರ್ಷಗಳಿಂದ ಮುದುವಾಲ ಮುಖ್ಯ ರಸ್ತೆಯಿಂದ ವಾಲಕೇಶಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 1 ಕಿಲೋಮೀಟರ್ ಉದ್ದದ ವಾಡಿಕೆ ರಸ್ತೆ ಗ್ರಾಮಸ್ಥರ ಸಂಚಾರಕ್ಕೆ ಪ್ರಮುಖ ಮಾರ್ಗವಾಗಿದೆ.

ಕಂದಾಯ ಗ್ರಾಮವಾಗಿ ಘೋಷಿಸಿದ ಬಳಿಕ ಜಿಲ್ಲಾಡಳಿತವು ಈ ವಾಡಿಕೆ ರಸ್ತೆಗೆ ಜಲ್ಲಿ ಬಿಚ್ಚಿಸಿ ಗ್ರಾಮಸ್ಥರ ಓಡಾಟಕ್ಕೆ ಅನುಕೂಲ ಕಲ್ಪಿಸಿತ್ತು. ಆದರೆ ಇತ್ತೀಚೆಗೆ ಜಿಲ್ಲಾಡಳಿತವು ಧನದ ಮುಪ್ಪತ್ತಿನ ಜಾಗವನ್ನು ರೈತರಿಗೆ ಆರ್‌ಟಿಸಿ ಮಾಡಿಕೊಟ್ಟಿದ್ದು, ಈವರೆಗೂ ಪೊಡ್ ಮಾಡಿ ಗಡಿ ಗುರುತು ಮಾಡಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವಾಲಕೇಶಪುರ ಗ್ರಾಮದಲ್ಲಿ ಹಿಂದುಳಿದ ಹಾಗೂ ಆರ್ಯದ್ರಾವಿಡ ಸಮುದಾಯದ ಬಡ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಈ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಆಯ್ಕೆ ಮಾಡಿತ್ತು. ಆದರೆ ಈಗ ಪಕ್ಕದ ಮುದುವಾಲ ಗ್ರಾಮದ ಕೆಲವರು ತಮ್ಮ ಗ್ರಾಮದ ಕೆರೆಗೆ ತೆರಳಲು ರಸ್ತೆ ಬೇಕೆಂಬ ಕಾರಣ ನೀಡಿ, ವಾಲಕೇಶಪುರದ ವಾಡಿಕೆ ರಸ್ತೆಗೆ ಚರಂಡಿ ನೀರು ಹರಿಸಿ ರಸ್ತೆಯನ್ನು ಹದಗೆಡಿಸಿದ್ದು, ಜನರು ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಲಾಗಿದೆ.

ಇದೇ ವೇಳೆ, ವಾಲಕೇಶಪುರದ ಈ ವಾಡಿಕೆ ರಸ್ತೆಯನ್ನು ದುರಸ್ತಿಗೊಳಿಸಲು ಗ್ರಾಮಾಂತರ ಶಾಸಕರ ಅನುದಾನದಡಿ ಹಣ ಮಂಜೂರಾಗಿದ್ದರೂ, ಮುದುವಾಲ ಗ್ರಾಮದ ಕೆಲವರು ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಹಾಗೂ ದಿನನಿತ್ಯ ಕೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರು ಇದೇ ರಸ್ತೆಯನ್ನು ಅವಲಂಬಿಸಿರುವುದರಿಂದ, ರಸ್ತೆ ಹದಗೆಟ್ಟಿರುವುದು ಗ್ರಾಮಸ್ಥರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ.

ಆದ್ದರಿಂದ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಕಂದಾಯ, ಪಂಚಾಯತ್ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಯಾವುದೇ ಒತ್ತಡಗಳಿಗೆ ಮಣಿಯದೆ ಸಾರ್ವಜನಿಕರ ಬಹುಕಾಲದ ವಾಡಿಕೆ ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

"ಮೂಲಭೂತ ಸೌಕರ್ಯವಾದ ರಸ್ತೆ ಯಾವುದೇ ಗ್ರಾಮಸ್ಥರ ಹಕ್ಕನ್ನು ಕಸಿದುಕೊಳ್ಳುವ ಸಾಧನವಾಗಬಾರದು. ದಶಕಗಳಿಂದ ಬಳಕೆಯಲ್ಲಿರುವ ಸಾರ್ವಜನಿಕ ವಾಡಿಕೆ ರಸ್ತೆಯನ್ನು ಸಂರಕ್ಷಿಸಿ, ಜನರ ಹಿತಾಸಕ್ತಿಯನ್ನು ಕಾಪಾಡಬೇಕು" ಎಂದು ಗ್ರಾಮಸ್ಥರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ