ಜೆಎನ್‌ಸಿಸಿ ಕಾಲೇಜು ವಿದ್ಯಾರ್ಥಿಗಳ ಕಾರು ಅಪಘಾತ: ಪಾದಚಾರಿ ಮಹಿಳೆಯ ಕಾಲು ಮುರಿತ

 

ಶಿವಮೊಗ್ಗ, ಜೂ.17: ನಗರದ ವಿನಾಯಕನಗರದಲ್ಲಿರುವ ರೋಟರಿ ರಕ್ತನಿಧಿಯ ಎದುರು ಬುಧವಾರ ಸಂಭವಿಸಿದ ಕಾರು ಅಪಘಾತದಲ್ಲಿ ಪಾದಚಾರಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು ಅವರ ಕಾಲು ಮುರಿದಿರುವ ಘಟನೆ ನಡೆದಿದೆ.

ಚೇವರ್ಲೆಟ್ ಕಂಪನಿಯ ಕಾರು ಚಾಲನೆ ಮಾಡುತ್ತಿದ್ದ ಜೆಎನ್‌ಸಿಸಿ ಕಾಲೇಜಿನ ವಿದ್ಯಾರ್ಥಿಗಳು ನಿಯಂತ್ರಣ ಕಳೆದುಕೊಂಡ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಕಾರು ಪಕ್ಕದ ಪಾದಚಾರಿ ರಸ್ತೆಗೆ ಡಿಕ್ಕಿ ಹೊಡೆದು ಹಾನಿಗೊಳಗಾಗಿದೆ.

ಘಟನೆ ಕುರಿತು ಚಂದ್ರೋದಯ ಪತ್ರಿಕೆಯೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು, "ಕಾರು ಟೈಯರ್ ಏಕಾಏಕಿ ಬ್ಲಾಸ್ಟ್ ಆದ ಕಾರಣ ವಾಹನದ ಮೇಲಿನ ನಿಯಂತ್ರಣ ತಪ್ಪಿತು. ಅಪಘಾತ ತಪ್ಪಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಾವು ಟ್ಯಾಂಕ್ ಮೊಹಲ್ಲಾಕ್ಕೆ ಲ್ಯಾಪ್‌ಟಾಪ್ ತರಲು ಹೋಗುತ್ತಿದ್ದೆವು" ಎಂದು ತಿಳಿಸಿದ್ದಾರೆ. ಕಾರಿನಲ್ಲಿ ಹರ್ಷ ಹಾಗೂ ಅವರ ಸ್ನೇಹಿತರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಮಹಿಳೆಯ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು, ಟೈಯರ್ ಬ್ಲಾಸ್ಟ್‌ನಿಂದಲೇ ಘಟನೆ ಸಂಭವಿಸಿತೇ ಅಥವಾ ಬೇರೆ ಯಾವುದೇ ಅಂಶಗಳಿವೆಯೇ ಎಂಬ ಕುರಿತು ತನಿಖೆ ಆರಂಭಿಸಿದ್ದಾರೆ.

ಪೊಲೀಸರ ತನಿಖೆಯ ಬಳಿಕವೇ ಅಪಘಾತದ ಕುರಿತು ಮತ್ತಷ್ಟು ಸತ್ಯಾಂಶಗಳು ಹೊರಬರಬೇಕಿದೆ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ