ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ ವಿಡಿಯೋ ಪ್ರಕರಣ ಭೇದಿಸಿದ ಸೈಬರ್ ಪೊಲೀಸರು: ಮೂವರು ಹೈಟೆಕ್ ಪದವೀಧರರ ಬಂಧನ
ಬೆಂಗಳೂರು, ಜೂನ್ 21: ಸ್ಯಾಂಡಲ್‌ವುಡ್ ನಟಿ ರುಕ್ಮಿಣಿ ವಸಂತ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಡೀಪ್‌ಫೇಕ್ ಅಶ್ಲೀಲ ವಿಡಿಯೋ ಪ್ರಕರಣವನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ನಕಲಿ ವಿಡಿಯೋ ಹಾಗೂ ಚಿತ್ರಗಳನ್ನು ಸೃಷ್ಟಿಸಿ ಹರಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರು ಉನ್ನತ ಶಿಕ್ಷಣ ಪಡೆದಿದ್ದು, ವಿವಿಧ ವೃತ್ತಿಪರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಬಂಧಿತರನ್ನು ಬೆಂಗಳೂರಿನ ನಾಗಸಂದ್ರದ ರಂಜಿತ್ (25), ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಚಂದ್ರಕಾಂತ್ (33) ಹಾಗೂ ಬಾಗಲಕೋಟೆ ಜಿಲ್ಲೆಯ ರವಿ ಕುಮಾರ್ (24) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ರಂಜಿತ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಎಐ ಆಧಾರಿತ ತಂತ್ರಜ್ಞಾನ ಬಳಸಿ ನಟಿಯ ಮುಖವನ್ನು ಆಕ್ಷೇಪಾರ್ಹ ವಿಡಿಯೋಗಳಿಗೆ ಜೋಡಿಸಿ ಡೀಪ್‌ಫೇಕ್ ವಿಷಯಗಳನ್ನು ಸೃಷ್ಟಿಸುತ್ತಿದ್ದ. ಚಂದ್ರಕಾಂತ್ ಖಾಸಗಿ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರೆ, ರವಿ ಕುಮಾರ್ ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವಿಡಿಯೋಗಳನ್ನು ವೈರಲ್ ಮಾಡಿ ವೀಕ್ಷಣೆ ಹಾಗೂ ಆದಾಯ ಗಳಿಸಲು ಪ್ರಯತ್ನಿಸಿದ್ದ ಎಂದು ತಿಳಿದುಬಂದಿದೆ.
ಕಳೆದ ತಿಂಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಆಕ್ಷೇಪಾರ್ಹ ವಿಡಿಯೋಗಳು ತಮ್ಮದೇ ಅಲ್ಲ ಎಂದು ಸ್ಪಷ್ಟಪಡಿಸಿದ್ದ ನಟಿ ರುಕ್ಮಿಣಿ ವಸಂತ, ಅವು ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ನಕಲಿ ದೃಶ್ಯಗಳಾಗಿವೆ ಎಂದು ಆರೋಪಿಸಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಐಡಿ ಹಾಗೂ ಸೈಬರ್ ಕಮಾಂಡ್ ಸೆಂಟರ್ ಅಧಿಕಾರಿಗಳು ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರು. ಪೊಲೀಸ್ ಮಹಾನಿರ್ದೇಶಕ ಡಾ. ಪ್ರಣಬ್ ಮೊಹಂತಿ ಅವರ ಮಾರ್ಗದರ್ಶನದಲ್ಲಿ ಹಾಗೂ ಡಿಐಜಿಪಿ ಆನಂದ್ ಕುಮಾರ್ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಲಾಗಿದ್ದ ಮೂರು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.
ಸದ್ಯ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ. ಜಪ್ತಿ ಮಾಡಲಾದ ಡಿಜಿಟಲ್ ಸಾಧನಗಳಿಂದ ಅಳಿಸಲಾದ ಮಾಹಿತಿಯನ್ನು ಮರುಪಡೆಯುವ ಕಾರ್ಯ ನಡೆಯುತ್ತಿದ್ದು, ಇತರ ನಟಿಯರ ಹೆಸರಲ್ಲಿಯೂ ಡೀಪ್‌ಫೇಕ್ ವಿಡಿಯೋಗಳನ್ನು ಸೃಷ್ಟಿಸಲಾಗಿದೆಯೇ ಹಾಗೂ ಅವುಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಡೀಪ್‌ಫೇಕ್ ತಂತ್ರಜ್ಞಾನದ ದುರ್ಬಳಕೆ ವ್ಯಕ್ತಿಗಳ ಗೌರವ, ಖಾಸಗಿತನ ಹಾಗೂ ಸೈಬರ್ ಸುರಕ್ಷತೆಗೆ ಗಂಭೀರ ಸವಾಲಾಗಿ ಪರಿಣಮಿಸುತ್ತಿದ್ದು, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೈಬರ್ ಕ್ರೈಂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ