ದುರ್ಗಿಗುಡಿ ಸಾರ್ವಜನಿಕ ಶೌಚಾಲಯಕ್ಕೆ ಎರಡು ತಿಂಗಳಿನಿಂದ ಬೀಗ; ಪಾಲಿಕೆ ವಿರುದ್ಧ ಸಾರ್ವಜನಿಕರ ಆಕ್ರೋಶ, ಪ್ರತಿಭಟನೆ ಎಚ್ಚರಿಕೆ


 ಶಿವಮೊಗ್ಗ, ಜೂನ್ 25: ನಗರದ ದುರ್ಗಿಗುಡಿ ಕೆಂಚಪ್ಪ ಕಾಂಪ್ಲೆಕ್ಸ್ ಹಿಂಭಾಗದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಕಳೆದ ಎರಡು ತಿಂಗಳಿನಿಂದ ಬೀಗಮುದ್ರೆ ಹಾಕಲಾಗಿದ್ದು, ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆ ಕುರಿತು ಹಲವಾರು ಬಾರಿ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರತಿ ಬಾರಿ ಒಂದೊಂದು ಕಾರಣ ನೀಡಿ ಕಾಲಹರಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ನಗರದ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿರುವ ಈ ಶೌಚಾಲಯವನ್ನು ನಿತ್ಯ ನೂರಾರು ಜನರು ಬಳಸುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿನಿಂದ ಅದು ಬಂದ್ ಆಗಿರುವುದರಿಂದ ಮಹಿಳೆಯರು, ವೃದ್ಧರು ಹಾಗೂ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಮಹಾನಗರ ಪಾಲಿಕೆಯ ಜವಾಬ್ದಾರಿಯಾಗಿದ್ದು, ಈ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ರೀತಿ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯಗಳಿಗೂ ಬೀಗಮುದ್ರೆ ಬಿದ್ದಿದ್ದು, ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯಲ್ಲಿ ಮಹಾನಗರ ಪಾಲಿಕೆ ವಿಫಲವಾಗಿದ್ದು, ಶೌಚಾಲಯಗಳು ತಿಂಗಳುಗಳ ಕಾಲ ಬಂದ್ ಆಗಿದ್ದರೂ ನಿರ್ವಹಣಾ ಬಿಲ್‌ಗಳನ್ನು ಮಾತ್ರ ನಿಯಮಿತವಾಗಿ ಪಾವತಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ನಗರದಲ್ಲಿ ಮಹಾನಗರ ಪಾಲಿಕೆ ನಿಯಮಗಳನ್ನು ಉಲ್ಲಂಘಿಸಿ ಹಲವು ವಾಣಿಜ್ಯ ಕಟ್ಟಡಗಳಿಗೆ ಪರವಾನಗಿ ನೀಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅನೇಕ ಕಟ್ಟಡಗಳಲ್ಲಿ ಕಡ್ಡಾಯವಾಗಿರುವ ಪಾರ್ಕಿಂಗ್ ವ್ಯವಸ್ಥೆ ಹಾಗೂ ಶೌಚಾಲಯ ಸೌಲಭ್ಯಗಳಿಲ್ಲದಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ. ಕಟ್ಟಡ ಮಾಲೀಕರು ಪ್ರತಿ ವರ್ಷ ಬಾಡಿಗೆಯನ್ನು ಹೆಚ್ಚಿಸುತ್ತಿದ್ದರೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ವಾಹನ ನಿಲುಗಡೆ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ, ಬಿಲ್ ಪಾವತಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ ನೀಡಿರುವ ಪರವಾನಗಿಗಳಲ್ಲಿ ಭ್ರಷ್ಟಾಚಾರ ಮತ್ತು ಕಮಿಷನ್ ವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪಗಳನ್ನೂ ನಾಗರಿಕರು ಮಾಡಿದ್ದಾರೆ. "ಸಾರ್ವಜನಿಕರಿಗೆ ಅಗತ್ಯವಾದ ಶೌಚಾಲಯ ಮತ್ತು ಪಾರ್ಕಿಂಗ್ ಸೌಲಭ್ಯ ಒದಗಿಸುವಲ್ಲಿ ಪಾಲಿಕೆ ಸಂಪೂರ್ಣ ವಿಫಲವಾಗಿದೆ. ತೆರಿಗೆ ಸಂಗ್ರಹ ಮತ್ತು ಬಿಲ್ ಪಾವತಿಯಲ್ಲಿ ಮಾತ್ರ ಆಸಕ್ತಿ ತೋರುತ್ತಿದ್ದು, ಸೇವೆ ಮಾತ್ರ ಶೂನ್ಯವಾಗಿದೆ" ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಸಾರ್ವಜನಿಕರು ಹಾಗೂ ಮಹಿಳೆಯರು ಆಗ್ರಹಿಸಿದ್ದು, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾಳೆಯಿಂದ ದುರ್ಗಿಗುಡಿ ಸಾರ್ವಜನಿಕ ಶೌಚಾಲಯದ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಮೆಸ್ಕಾಂ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸಾರ್ವಜನಿಕರಿಗೆ ಅಗತ್ಯವಾದ ಶೌಚಾಲಯ ಸೌಲಭ್ಯವನ್ನು ಕಲ್ಪಿಸಬೇಕು. ಜೊತೆಗೆ ನಗರದ ಎಲ್ಲ ವಾಣಿಜ್ಯ ಕಟ್ಟಡಗಳ ಪಾರ್ಕಿಂಗ್ ಮತ್ತು ಶೌಚಾಲಯ ವ್ಯವಸ್ಥೆಯ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಸಾರ್ವಜನಿಕ ಶೌಚಾಲಯಗಳ ನಿರ್ವಹಣಾ ವೆಚ್ಚ ಹಾಗೂ ಬಿಲ್ ಪಾವತಿ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ