ಉಡುಪಿಯ ಬಳಿಕ ಶಿವಮೊಗ್ಗ ನ್ಯಾಯಾಲಯಕ್ಕೂ ಬಾಂಬ್ ಬೆದರಿಕೆ ಇ-ಮೇಲ್; ಒಂದೇ ಜಾಲದ ಕೈವಾಡದ ಶಂಕೆ
ಶಿವಮೊಗ್ಗ, ಜೂನ್ 24: ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಜೂನ್ 22ರಂದು ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದ ಘಟನೆ ಮಾಸುವ ಮುನ್ನವೇ ಇದೀಗ ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೂ ಅದೇ ರೀತಿಯ ಬೆದರಿಕೆ ಇ-ಮೇಲ್ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಎರಡೂ ಘಟನೆಗಳ ನಡುವೆ ಸಾಮ್ಯತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಒಂದೇ ವ್ಯಕ್ತಿ ಅಥವಾ ಸಂಘಟಿತ ಜಾಲದ ಕೈವಾಡ ಇರಬಹುದೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ಇ-ಮೇಲ್ ಮೂಲಕ ಬಾಂಬ್ ಇರಿಸಲಾಗಿದೆ ಎಂಬ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಶಿವಮೊಗ್ಗ ನ್ಯಾಯಾಲಯದ ಆವರಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಜಯನಗರ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಪೊಲೀಸ್ ಘಟಕಗಳು ಸ್ಥಳಕ್ಕೆ ಧಾವಿಸಿ ತಪಾಸಣೆ ಕಾರ್ಯ ಆರಂಭಿಸಿವೆ.
ನ್ಯಾಯಾಲಯದ ಆವರಣ, ಕಟ್ಟಡಗಳು, ವಾಹನ ನಿಲುಗಡೆ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ನ್ಯಾಯಾಲಯಕ್ಕೆ ಆಗಮಿಸುವ ವಾಹನಗಳ ತಪಾಸಣೆಯನ್ನೂ ಕಟ್ಟುನಿಟ್ಟಾಗಿ ಕೈಗೊಳ್ಳಲಾಗಿದೆ. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿಯನ್ನೂ ಎಚ್ಚರಿಕೆಯಲ್ಲಿರಿಸಲಾಗಿದೆ.
ಜೂನ್ 22ರಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೂ ಇದೇ ರೀತಿಯ ಬೆದರಿಕೆ ಇ-ಮೇಲ್ ಬಂದಿತ್ತು. ಆಗ ಪೊಲೀಸರು, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದರೂ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿರಲಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಅದು ಸುಳ್ಳು ಬೆದರಿಕೆ ಸಂದೇಶವಾಗಿರುವ ಸಾಧ್ಯತೆ ವ್ಯಕ್ತವಾಗಿತ್ತು.
ಈಗ ಕೇವಲ ಎರಡು ದಿನಗಳ ಅಂತರದಲ್ಲಿ ಶಿವಮೊಗ್ಗ ನ್ಯಾಯಾಲಯಕ್ಕೂ ಬೆದರಿಕೆ ಇ-ಮೇಲ್ ಬಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಾಜ್ಯದ ನ್ಯಾಯಾಲಯಗಳನ್ನು ಗುರಿಯಾಗಿಸಿಕೊಂಡು ಯಾರಾದರೂ ಉದ್ದೇಶಪೂರ್ವಕವಾಗಿ ಆತಂಕ ಸೃಷ್ಟಿಸಲು ಯತ್ನಿಸುತ್ತಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.ಶಿವಮೊಗ್ಗ ವಕೀಲರ ಸಂಘದ ಕಾರ್ಯಕಾರಿ ಮಂಡಳಿ ಸಾರ್ವಜನಿಕರು, ವಕೀಲರು ಹಾಗೂ ಕಕ್ಷೀದಾರರು ಪೊಲೀಸ್ ಇಲಾಖೆಯ ಭದ್ರತಾ ಕ್ರಮಗಳಿಗೆ ಸಹಕರಿಸುವಂತೆ ಮನವಿ ಮಾಡಿದೆ. ಇ-ಮೇಲ್‌ನ ಮೂಲ ಪತ್ತೆ ಹಾಗೂ ಅದರ ಹಿಂದಿರುವ ವ್ಯಕ್ತಿಗಳನ್ನು ಗುರುತಿಸಲು ಸೈಬರ್ ತಜ್ಞರ ನೆರವಿನೊಂದಿಗೆ ತನಿಖೆ ಮುಂದುವರಿದಿದೆ.
ಬೆದರಿಕೆ ಸಂದೇಶಗಳ ನಡುವೆ ಇರುವ ಸಾಮ್ಯತೆಗಳನ್ನು ಪರಿಶೀಲಿಸಲಾಗುತ್ತಿದ್ದು, ಉಡುಪಿ ಮತ್ತು ಶಿವಮೊಗ್ಗ ಪ್ರಕರಣಗಳ ನಡುವೆ ಯಾವುದೇ ಸಂಪರ್ಕವಿದೆಯೇ ಎಂಬುದರ ಕುರಿತೂ ತನಿಖಾ ಸಂಸ್ಥೆಗಳು ಮಾಹಿತಿ ಕಲೆಹಾಕುತ್ತಿವೆ.




ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ