ರಕ್ತ ನೀಡಿ, ಜೀವಗಳನ್ನು ಉಳಿಸಿ : ರೋಟರಿ ಜಿ.ವಿಜಯ್ ಕುಮಾರ್
ಶಿವಮೊಗ್ಗ: ಆರೋಗ್ಯವಂತ ವ್ಯಕ್ತಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ಜೀವ ಉಳಿಸುವ ಶ್ರೇಷ್ಠ ಕಾರ್ಯದಲ್ಲಿ ಕೈಜೋಡಿಸಬಹುದು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್ ಹೇಳಿದರು.
ನಗರದ ಹಳೆ ಜೈಲು ವಿನೋಬನಗರದ ಆವರಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವಿಶೇಷ ಸಹಕಾರದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಶೇಷ ಕಾರ್ಯಪಡೆ, ಸಿಮ್ಸ್, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ, ರಕ್ತ ನಿಧಿ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಸ್ವಯಂಪ್ರೇರಿತ ರಕ್ತದಾನಿಗಳನ್ನು ಗೌರವಿಸಲು, ಸುರಕ್ಷಿತ ರಕ್ತ ಮತ್ತು ಪ್ಲಾಸ್ಮಾದ ನಿರಂತರ ಅಗತ್ಯತೆಯ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು ವಾರ್ಷಿಕವಾಗಿ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನವ ರಕ್ತದ ಗುಂಪನ್ನು ಕಂಡುಹಿಡಿದ ವಿಜ್ಞಾನಿ ಕಾರ್ಲ್ ಲ್ಯಾಂಡ್ಸ್ಟೈನರ್ ಅವರ ಜನ್ಮ ವಾರ್ಷಿಕೋತ್ಸವವನ್ನು ಸ್ಮರಿಸುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆ ಪೊಲೀಸ್ ಇನ್ಸಪೆಕ್ಟರ್ ಕೀರ್ತಿ ಕುಮಾರ್ ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪಾದಿಸಲಾಗುವುದಿಲ್ಲ. ಅದು ನೀಡಲು ಸಿದ್ಧರಿರುವ ಆರೋಗ್ಯವಂತ ಮಾನವ ದಾನಿಗಳಿಂದ ಮಾತ್ರ ಬರಬಹುದು. ನಿಯಮಿತವಾಗಿ ರಕ್ತದಾನ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿ.ಆರ್.ಧನಂಜಯ್ ಮಾತನಾಡಿ, ಒಬ್ಬ ದಾನಿ ಮೂರು ಜೀವಗಳನ್ನು ಉಳಿಸಬಹುದು. ರಕ್ತದ ಬೇಡಿಕೆ ನಿರಂತರವಾಗಿ ಮತ್ತು ಅಗಾಧವಾಗಿದ್ದು, ಅನೇಕ ದೈನಂದಿನ ಮತ್ತು ತುರ್ತು ವೈದ್ಯಕೀಯ ಅಗತ್ಯಗಳಲ್ಲಿ ಕಂಡುಬರುತ್ತದೆ. ಭಾರತಕ್ಕೆ ವಾರ್ಷಿಕವಾಗಿ ಲಕ್ಷಾಂತರ ಯೂನಿಟ್ ರಕ್ತ ಬೇಕಾಗುತ್ತದೆ ಎಂದು ತಿಳಿಸಿದರು.
ವೈದ್ಯಾಧಿಕಾರಿ ಡಾ. ಡೋನಾ ರೆಮ್ಯಾ ಮಾತನಾಡಿ, ಅಪಘಾತಕ್ಕೊಳಗಾದವರು, ಅಕಾಲಿಕ ಶಿಶು ಅಥವಾ ಕಿಮೊಥೆರಪಿಗೆ ಒಳಗಾಗುವ ರೋಗಿಗೆ ರಕ್ತದ ಅವಶ್ಯಕತೆ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ರಕ್ತದಾನ ಮಾಡಬೇಕು ಎಂದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಶೇಷ ಕಾರ್ಯಪಡೆ ಸಿಬ್ಬಂದಿ ರಕ್ತದಾನ ಮಾಡಿದರು. ಆರ್‌ಎಸ್‌ಐ ಗಣೇಶ್, ಆರ್‌ಎಸ್‌ಐ ನವೀನ್, ಎಚ್‌ಸಿ ಡಿ.ಎನ್.ರವೀಂದ್ರ, ನಾಗರಾಜ್ ಸಚಿನ್, ಲೆಕ್ಕ ಪರಿಶೋಧಕ ಆರ್.ಮನೋಹರ, ಸಿಮ್ಸ್, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ, ಮೆಗ್ಗಾನ್ ರಕ್ತ ಕೇಂದ್ರದ ಸಿಬ್ಬಂದಿ ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ