ಶಿವಮೊಗ್ಗ ಜಿಲ್ಲೆಯಲ್ಲಿ ಮಾದಕ ವಸ್ತು ವಿರುದ್ಧ ಪೊಲೀಸ್ ಕಾರ್ಯಾಚರಣೆ ತೀವ್ರ; ₹24.55 ಲಕ್ಷ ಮೌಲ್ಯದ 59 ಕೆಜಿ ಗಾಂಜಾ ನಾಶಕ್ಕೆ ಸಿದ್ಧತೆ


 ಶಿವಮೊಗ್ಗ, ಜೂನ್ 27: ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಮಾದಕ ವಸ್ತುಗಳ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸಿದ್ದು, ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ₹24,55,640 ಮೌಲ್ಯದ 59 ಕೆಜಿ 119 ಗ್ರಾಂ ಗಾಂಜಾವನ್ನು ಇಂದು (ಜೂನ್ 27) ನಗರದ ಶುಶ್ರುತ ಬಯೋ-ಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್ ಸೊಸೈಟಿಯ ಕಾಮನ್ ಬಯೋ-ಮೆಡಿಕಲ್ ವೇಸ್ಟ್ ಟ್ರೀಟ್ಮೆಂಟ್ ಮತ್ತು ಡಿಸ್ಪೋಸಲ್ ಘಟಕದಲ್ಲಿ ನಾಶಪಡಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೂ ಸುಮಾರು 16 ಕೆಜಿ ಗಾಂಜಾ ನ್ಯಾಯಾಲಯದ ಅನುಮತಿಗಾಗಿ ಬಾಕಿ ಇದೆ ಎಂದು ಹೇಳಿದರು.


ಜನವರಿ 1ರಿಂದ ಜೂನ್ 26ರವರೆಗೆ ಜಿಲ್ಲೆಯಲ್ಲಿ ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, 27 ಗಾಂಜಾ ಸಾಗಣೆ ಪ್ರಕರಣಗಳು, 204 ಗಾಂಜಾ ಸೇವನೆ ಪ್ರಕರಣಗಳು, 374 ಮಂದಿ ಗಾಂಜಾ ಸೇವನೆ ದೃಢಪಟ್ಟ ಪ್ರಕರಣಗಳು, 341 ವಾಹನ ತಪಾಸಣೆ ಕಾರ್ಯಾಚರಣೆಗಳು, 141 ಮಂದಿಯನ್ನು ಕೌನ್ಸೆಲಿಂಗ್‌ಗೆ ಕಳುಹಿಸಿರುವುದು, 660 ಏರಿಯಾ ಡಾಮಿನೇಷನ್ ಕಾರ್ಯಾಚರಣೆಗಳು, 310 ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ಹಾಗೂ 85 ಎನ್‌ಡಿಪಿಎಸ್ ವಾರಂಟ್‌ಗಳ ಜಾರಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ 17 ರಿಂದ 25 ವರ್ಷದ ಯುವಕರಲ್ಲಿ ಗಾಂಜಾ ಸೇವನೆ ಹೆಚ್ಚಿರುವುದು ಕಂಡುಬಂದಿದ್ದು, ಕೂಲಿ ಕಾರ್ಮಿಕರಲ್ಲಿಯೂ ಈ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಎಸ್‌ಪಿ ಆತಂಕ ವ್ಯಕ್ತಪಡಿಸಿದರು. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 100 ಗ್ರಾಂ ಎಂಡಿಎಂಎ (MDMA) ವಶಪಡಿಸಿಕೊಂಡಿರುವುದಾಗಿಯೂ ತಿಳಿಸಿದರು.

21 ಪದವಿ ಕಾಲೇಜುಗಳಲ್ಲಿ 484 ವಿದ್ಯಾರ್ಥಿಗಳ ಗಾಂಜಾ ಸೇವನೆ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಮೂರು ವಿದ್ಯಾರ್ಥಿಗಳು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಅವರಿಗೆ ಕೌನ್ಸೆಲಿಂಗ್ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯ ಕೃಷಿಭೂಮಿ, ಅರಣ್ಯ ಹಾಗೂ ದೂರದ ಪ್ರದೇಶಗಳಲ್ಲಿ ಡ್ರೋನ್ ಕ್ಯಾಮೆರಾಗಳ ಮೂಲಕ ಗಾಂಜಾ ಬೆಳೆ ಮತ್ತು ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ. ಶಾಲೆ-ಕಾಲೇಜುಗಳಲ್ಲಿ ಆಂಟಿ ಡ್ರಗ್ ಸಮಿತಿಗಳನ್ನು ರಚಿಸಿ ದೂರು ಪೆಟ್ಟಿಗೆಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದರು.


ಮಾದಕ ವಸ್ತು ಮಾರಾಟದ ಬಗ್ಗೆ ಸಾರ್ವಜನಿಕರು Public Eye ಆ್ಯಪ್ ಅಥವಾ 8277982900 ಸಂಖ್ಯೆಗೆ ಗೌಪ್ಯವಾಗಿ ಮಾಹಿತಿ ನೀಡಬಹುದು ಎಂದು ಮನವಿ ಮಾಡಿದ ಅವರು, ಔಷಧ ಅಂಗಡಿಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಮಾದಕ ಗುಣವುಳ್ಳ ಔಷಧಗಳನ್ನು ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಅಲ್ಲದೆ, Drug Free Karnataka ಅಭಿಯಾನ, ರಾಷ್ಟ್ರೀಯ ಮಾದಕ ವಸ್ತು ಸಹಾಯವಾಣಿ 1908, ಹಾಗೂ ಮಾನಸ್ ಸಹಾಯವಾಣಿ 1933 ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಎಸ್‌ಪಿ ನಿಖಿಲ್ ಬಿ. ತಿಳಿಸಿದರು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ