ಕರ್ನಾಟಕ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಘ (KASMN) ಅಸ್ತಿತ್ವಕ್ಕೆ ರಾಜ್ಯಾಧ್ಯಕ್ಷರಾಗಿ ಷಡಾಕ್ಷರಪ್ಪ ಜಿ.ಆರ್., ಉಪಾಧ್ಯಕ್ಷರಾಗಿ ಕೃಷ್ಣಮೂರ್ತಿ ಹೆಬ್ಬಾರ್ ಆಯ್ಕೆ
ಬೆಂಗಳೂರು, ಮೇ 30: ರಾಜ್ಯದ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು, ಯೂಟ್ಯೂಬ್ ಚಾನೆಲ್‌ಗಳು ಹಾಗೂ ಆನ್‌ಲೈನ್ ಮಾಧ್ಯಮಗಳ ಸಂಪಾದಕರು ಮತ್ತು ಪ್ರಕಾಶಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ “ಕರ್ನಾಟಕ ಅಸೋಷಿಯೇಷನ್ ಆಫ್ ಸ್ಮಾಲ್ ಅಂಡ್ ಮೀಡಿಯಂ ನ್ಯೂಸ್ ಪೇಪರ್ಸ್” (KASMN) ಎಂಬ ನೂತನ ಸಂಘ ಅಸ್ತಿತ್ವಕ್ಕೆ ಬಂದಿದೆ.
ಬೆಂಗಳೂರು ಜಯನಗರದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗದ ಸುದ್ದಿಸಾರ ದಿನಪತ್ರಿಕೆಯ ಪ್ರಕಾಶಕ ಷಡಾಕ್ಷರಪ್ಪ ಜಿ.ಆರ್. ಅವರನ್ನು ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹೊನ್ನಾವರದ ನಾಗರೀಕ ಪತ್ರಿಕೆಯ ಸಂಪಾದಕ-ಪ್ರಕಾಶಕ ಕೃಷ್ಣಮೂರ್ತಿ ಹೆಬ್ಬಾರ್ ಉಪಾಧ್ಯಕ್ಷರಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಜಾಕಾಲ ಪತ್ರಿಕೆಯ ಸಂಪಾದಕ-ಪ್ರಕಾಶಕ ಪುರುಷೋತ್ತಮ ಕೆ. ಕಾರ್ಯದರ್ಶಿಯಾಗಿ, ಐನಿ ಟಿವಿ ಯೂಟ್ಯೂಬ್ ಚಾನೆಲ್‌ನ ಸಂಪಾದಕಿ ಭಾರತಿ ರವಿ ಕುಮಾರ್ ಜಂಟಿ ಕಾರ್ಯದರ್ಶಿಯಾಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸ್ಪೆಷಲ್ ನ್ಯೂಸ್ ಪತ್ರಿಕೆಯ ಸಂಪಾದಕ-ಪ್ರಕಾಶಕ ಬಾವ ಪದರಂಗಿ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಇದೇ ವೇಳೆ ಹತ್ತು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಪತ್ರಿಕೆಗಳ ಸಂಪಾದಕರು ಮತ್ತು ಪ್ರಕಾಶಕರು ನಿರ್ದೇಶಕರಾಗಿ ಸ್ಥಾನ ಪಡೆದಿದ್ದಾರೆ.
ಸಂಘದ ಕೇಂದ್ರ ಕಚೇರಿ ಬೆಂಗಳೂರು ಜಯನಗರದಲ್ಲಿ ಕಾರ್ಯನಿರ್ವಹಿಸಲಿದ್ದು, ರಾಜ್ಯದ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು, ಡಿಜಿಟಲ್ ಮಾಧ್ಯಮಗಳು ಹಾಗೂ ಯೂಟ್ಯೂಬ್ ಚಾನೆಲ್‌ಗಳ ಸಂಪಾದಕರು-ಪ್ರಕಾಶಕರನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಲಿದೆ.
ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಷಡಾಕ್ಷರಪ್ಪ ಜಿ.ಆರ್., “ಸಣ್ಣ ಮತ್ತು ಮಧ್ಯಮ ಮಾಧ್ಯಮ ಸಂಸ್ಥೆಗಳ ವೃತ್ತಿಪರ ಸಾಮರ್ಥ್ಯ ವೃದ್ಧಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು, ಮಾಧ್ಯಮ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಗಮನ ಸೆಳೆಯುವುದು ಹಾಗೂ ಸದಸ್ಯರ ಹಿತಾಸಕ್ತಿಯನ್ನು ರಕ್ಷಿಸುವುದು ಸಂಘದ ಪ್ರಮುಖ ಉದ್ದೇಶವಾಗಿದೆ” ಎಂದು ತಿಳಿಸಿದರು.
ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾಧ್ಯಮ ನೀತಿಗಳು ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಬೆಳವಣಿಗೆಗೆ ಪೂರಕವಾಗಿಲ್ಲ. ದ್ವಿತೀಯ ಪತ್ರಿಕಾ ಆಯೋಗದ ಶಿಫಾರಸುಗಳು ಸಮರ್ಪಕವಾಗಿ ಜಾರಿಯಾಗದಿರುವುದು ಹಾಗೂ ಪ್ರೆಸ್ ಕೌನ್ಸಿಲ್‌ನ ಮೂಲ ಉದ್ದೇಶಗಳು ಈಡೇರದಿರುವುದರಿಂದ ಈ ವಲಯ ಸಂಕಷ್ಟಕ್ಕೆ ಸಿಲುಕಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘವು ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ