ಆಗುಂಬೆ ಕಾಳಿಂಗ ಸರ್ಪ ಪ್ರಕರಣ: ಚಾರ್ಜ್‌ಶೀಟ್ ವಿಳಂಬಕ್ಕೆ ಪರಿಸರಾಸಕ್ತರ ಆಕ್ರೋಶ


ಶಿವಮೊಗ್ಗ: ಆಗುಂಬೆಯಲ್ಲಿ ಕಾಳಿಂಗ ಸರ್ಪ (King Cobra) ಶೋಷಣೆ ಪ್ರಕರಣ ರಾಜ್ಯದ ವನ್ಯಜೀವಿ ಪ್ರೇಮಿಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣವಾಗಿದೆ. ಈ ಸಂಬಂಧ ಆಗುಂಬೆಯ ಪಿ. ಗೌರಿಶಂಕರ್ ವಿರುದ್ಧ 2025ರ ಸೆಪ್ಟೆಂಬರ್ ತಿಂಗಳಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದರೂ, ಇಂದಿಗೂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾಗದಿರುವುದು ಪರಿಸರಾಸಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಅರಣ್ಯ ಇಲಾಖೆಯ ತನಿಖಾ ಮಾಹಿತಿಯ ಪ್ರಕಾರ, ಅನಧಿಕೃತವಾಗಿ ಕಾಳಿಂಗ ಸರ್ಪ ಹಿಡಿದು ಶೋಷಣೆ ಮಾಡಿದ ವಿಡಿಯೋ ಆಧಾರದಲ್ಲಿ Wildlife Protection Act, 1972 ಅಡಿಯಲ್ಲಿ “ಬೇಟೆ” ಸಂಬಂಧಿತ ಪ್ರಕರಣ ದಾಖಲಾಗಿತ್ತು. ಈ ವೇಳೆ ಬಳಸಲಾಗಿದ್ದ ಹಾವು ಹಿಡಿಯುವ ಉಪಕರಣಗಳು ಹಾಗೂ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದರ ಜೊತೆಗೆ ಅಕ್ರಮವಾಗಿ ಕಾಡು ಪ್ರದೇಶ ಪ್ರವೇಶಿಸಿದ ಆರೋಪದಡಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಪ್ರಶಾಂತ್ ಆಗುಂಬೆ ಸಹ ಆರೋಪಿ ಎಂದು ಹೇಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ‘ಹೊಟ್ಟು ನೊಣ’ ಜಾತಿಯ ಮರವನ್ನು ಕಡಿದು ದಾಸ್ತಾನು ಇಟ್ಟಿದ್ದ ಆರೋಪವೂ ದಾಖಲಾಗಿತ್ತು.

ಈ ಮೂರು ಪ್ರಕರಣಗಳ ತನಿಖೆ ಪೂರ್ಣಗೊಂಡು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಬಾಕಿ ಇದೆ ಎನ್ನಲಾಗುತ್ತಿದೆ. ಆದರೆ ಪ್ರಕರಣ ದಾಖಲಾಗಿ ಹಲವು ತಿಂಗಳು ಕಳೆದರೂ ಚಾರ್ಜ್‌ಶೀಟ್ ಸಲ್ಲಿಕೆಯಾಗದಿರುವುದು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಪರಿಸರವಾದಿಗಳು ಮತ್ತು ವನ್ಯಜೀವಿ ಪ್ರೇಮಿಗಳು, “ಪ್ರಕರಣ ಗಂಭೀರವಾಗಿರುವುದರಿಂದ ಅಧಿಕಾರಿಗಳು ತ್ವರಿತವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ವಿಳಂಬದಿಂದ ನ್ಯಾಯ ಪ್ರಕ್ರಿಯೆ ದುರ್ಬಲವಾಗುವ ಆತಂಕ ಇದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಲೆನಾಡು ಭಾಗದಲ್ಲಿ ಕಾಳಿಂಗ ಸರ್ಪವನ್ನು ಧಾರ್ಮಿಕ ನಂಬಿಕೆಯಿಂದ ಪೂಜಿಸುವ ಹಿನ್ನೆಲೆ, ಈ ರೀತಿಯ ಪ್ರಕರಣಗಳು ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಕುರಿತು ಸಂಬಂಧಪಟ್ಟ ಅರಣ್ಯಾಧಿಕಾರಿಗಳ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದ್ದು, ಚಾರ್ಜ್‌ಶೀಟ್ ಸಲ್ಲಿಕೆ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ಪರಿಸರ ಸಂಘಟನೆಗಳು ಒತ್ತಾಯಿಸಿವೆ.

ಪ್ರಕರಣದ ಸತ್ಯಾಸತ್ಯತೆ ಹಾಗೂ ಮುಂದಿನ ಕಾನೂನು ಕ್ರಮಗಳ ಕುರಿತು ನ್ಯಾಯಾಲಯ ಮತ್ತು ಅರಣ್ಯ ಇಲಾಖೆಯ ಅಧಿಕೃತ ಕ್ರಮವೇ ಅಂತಿಮವಾಗಲಿದೆ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ