ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಮರಳು ಅಡ್ಡೆಗಳ ಮೇಲೆ ಲೋಕಾಯುಕ್ತ ಮಹಾದಾಳಿ

ಶಿವಮೊಗ್ಗ, ಮೇ 30: ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲೇ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಂಗ್ರಹ ಅಡ್ಡೆಗಳ ವಿರುದ್ಧ ಅತಿ ದೊಡ್ಡ ಮಟ್ಟದ ಲೋಕಾಯುಕ್ತ ಕಾರ್ಯಾಚರಣೆ ನಡೆದಿರುವ ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗ ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಹಲವು ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳ ತಂಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಅಕ್ರಮ ಮರಳು ಚಟುವಟಿಕೆಗಳನ್ನು ಪತ್ತೆಹಚ್ಚಿದೆ.
ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕುಗಳ ವ್ಯಾಪ್ತಿಯ 25ಕ್ಕೂ ಹೆಚ್ಚು ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ. ತುಂಗಾ, ಭದ್ರಾ ಹಾಗೂ ಶರಾವತಿ ನದಿ ತೀರದ ಹಲವು ಪ್ರದೇಶಗಳಲ್ಲಿ ಅಕ್ರಮ ಮರಳು ಸಂಗ್ರಹ ಮತ್ತು ಸಾಗಣೆ ನಡೆಯುತ್ತಿರುವ ಬಗ್ಗೆ ಬಂದಿದ್ದ ದೂರುಗಳ ಆಧಾರದ ಮೇಲೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಭದ್ರಾವತಿ ತಾಲೂಕಿನ ಸನ್ಯಾಸಿಕೋಡ, ಮಗ್ಗಿ, ನಿಂಬೆಗೊಂದಿ, ಮಂಗೋಟೆ, ಶಿವಮೊಗ್ಗ ತಾಲೂಕಿನ ಕೂಡಲಿ ಹಾಗೂ ಹಾಡೋನಹಳ್ಳಿ, ತೀರ್ಥಹಳ್ಳಿ ತಾಲೂಕಿನ ಮುಂಡಳ್ಳಿ, ತೂದೂರು, ದಬ್ಬಣಗದ್ದೆ, ಹೊಸನಗರ ತಾಲೂಕಿನ ಸುತ್ತಾ, ಹರಿದ್ರಾವತಿ, ಸಂಪೆಕಟ್ಟೆ ಮತ್ತು ಸಾಗರ ತಾಲೂಕಿನ ಆವಿನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ದಾಳಿ ವೇಳೆ ಜೆಸಿಬಿ, ಟ್ರ್ಯಾಕ್ಟರ್, ಲಾರಿ ಸೇರಿದಂತೆ 50ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದು, ನೂರಾರು ಮೆಟ್ರಿಕ್ ಟನ್ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮರಳನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದರ ಜೊತೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಪಿ.ಕೆ. ನಾಯಕ್ ಅವರ ಕಚೇರಿಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ಅಕ್ರಮ ಮರಳುಗಾರಿಕೆ ಪ್ರಕರಣಗಳಲ್ಲಿ ಸುಮಾರು ₹1.5 ಕೋಟಿ ದಂಡ ವಿಧಿಸಲಾಗಿದ್ದರೂ, ಅದರ ವಸೂಲಾತಿ ಕುರಿತು ಪ್ರಶ್ನೆಗಳು ಉದ್ಭವಿಸಿರುವ ಹಿನ್ನೆಲೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ ಎನ್ನಲಾಗಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲ್ ಅವರ ನಿರ್ದೇಶನದಂತೆ ಸರ್ಚ್ ವಾರಂಟ್ ಪಡೆದು ಈ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಬೆಳಗ್ಗೆಯಿಂದ ಆರಂಭವಾದ ದಾಳಿ ಸಂಜೆವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾ ವಿರುದ್ಧದ ಈ ಕಾರ್ಯಾಚರಣೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ಹೊರಬರುವ ನಿರೀಕ್ಷೆಯಿದೆ.
– ಚಂದ್ರೋದಯ ವಿಶೇಷ ವರದಿ


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ