ಹಿಮಾಲಯದ ಚಾರಣ ಪ್ರವಾಸಿಗರ ಸ್ವರ್ಗ
ಶಿವಮೊಗ್ಗ: ಚಾರಣಿಗರ ಸ್ವರ್ಗ ಹಿಮಾಲಯ ಪ್ರದೇಶ. ಪ್ರತಿ ದಿನ ಪ್ರಾಕೃತಿಕ ವಿಸ್ಮಯ ಗೋಚರಿಸಿ ವಿಶೇಷ ಅನುಭವ ನೀಡುವ ಸರ್ ಪಾಸ್ ಅನ್ನು ಚಾರಣಗಳ ರಾಜ ಎನ್ನಲಾಗುತ್ತದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಚೇರ್ಮನ್ ಎಸ್.ಎಸ್.ವಾಗೇಶ್ ಹೇಳಿದರು.
ಶಿವಮೊಗ್ಗ, ತರುಣೋದಯ, ಹೊಸನಗರ, ಚಿಕ್ಕಮಗಳೂರು, ಮೈಸೂರು, ಬೆಂಗಳೂರು ಘಟಕಗಳ 56 ಚಾರಣಿಗ ಸದಸ್ಯರು ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮಾತನಾಡಿ, ಸರ್ ಪಾಸ್ ಹಿಮಾಲಯ ಚಾರಣವು ಪ್ರತಿಯೊಬ್ಬರಿಗೂ ಸಂತಸ ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಹಿಮಾಲಯ ದೇವ ಭೂಮಿ. ಯೂತ್ ಹಾಸ್ಟೆಲ್ ಸಹಕಾರ ನೀಡಿ ಉತ್ತಮ ಅನುಕೂಲ ಒದಗಿಸಿ, ಚಾರಣಿಗರಿಗೆ ನೆರವು ನೀಡುತ್ತಾ ಬಂದಿದೆ. ಪ್ರತಿ ವರ್ಷ ಸಾವಿರಾರು ಚಾರಣಿಗರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಪ್ರತಿಯೊಬ್ಬರೂ ಈ ಸಂಸ್ಥೆಯ ಸದಸ್ಯರಾಗಿ ಇದರ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.
ಚಾರಣ ಮಿತ್ರ ಸಂಸ್ಥೆಯ ಪ್ರಮುಖರಾದ ಹರೀಶ್ ಪಂಡಿತ್ ಮಾತನಾಡಿ, ಈಗಾಗಲೇ ನಮ್ಮ ಸಂಸ್ಥೆ ವತಿಯಿಂದ ಸಾಕಷ್ಟು ರಾಜ್ಯ, ರಾಷ್ಟ್ರ ಹಾಗೂ ಸ್ಥಳೀಯ ಮಟ್ಟದ ಚಾರಣಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಚಾರಣದಿಂದ ದೇಹ ಮನಸ್ಸು ಸದೃಢವಾಗುವುದರ ಜೊತೆಗೆ ನಮಗೆ ಸ್ಥಳದ ಮಹತ್ವ ಹಾಗೂ ಬೇರೆ ಬೇರೆ ಚಾರಣಿಗರ ಸಂಪರ್ಕ ಸಿಗುತ್ತದೆ ಎಂದು ನುಡಿದರು.
ಪ್ರವೀಣ್ ಅಕ್ಕಸಾಲಿ ಎಲ್ಲರನ್ನು ಸ್ವಾಗತಿಸಿದರು. ರಮೇಶ್ ನಾಡಿಗ್ ಪ್ರಾಸ್ತಾವಿಕ ಮಾತನಾಡಿದರು. ಪ್ರಶಾಂತ್ ವಂದಿಸಿದರು. ಗಣೇಶ್ ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ