ಬಡವರ ಬಾಳಿಗೆ ಬೆಳಕಾದ ಯುವ ಹೃದಯ — ಆಂತೋಣಿ ಚಿರಂಜೀವಿ ಬಾಬು


ಇಂದಿನ ಕಾಲದಲ್ಲಿ ಸ್ವಾರ್ಥದ ಬದುಕು ಹೆಚ್ಚಾಗುತ್ತಿರುವಾಗ, ತನ್ನ ಬದುಕಿನ ಅರ್ಥವನ್ನು ಬಡವರ ಕಣ್ಣೀರನ್ನು ಒರೆಸುವುದರಲ್ಲಿ ಕಂಡುಕೊಂಡಿರುವ ಯುವ ಮನಸ್ಸೊಂದು ಶಿವಮೊಗ್ಗದಲ್ಲಿ ಸಾವಿರಾರು ಜನರ ಹೃದಯ ಗೆದ್ದಿದೆ. ಆ ಯುವ ಹೃದಯವೇ ಆಂತೋಣಿ ಚಿರಂಜೀವಿ ಬಾಬು.

“ಬಡವರ ಸೇವೆಯಲ್ಲೇ ನನಗೆ ಆತ್ಮತೃಪ್ತಿ ಸಿಗುತ್ತದೆ” ಎನ್ನುವ ಅವರ ಮಾತು ಕೇವಲ ಹೇಳಿಕೆಯಾಗಿಲ್ಲ, ಅದು ಅವರ ಬದುಕಿನ ಧರ್ಮವಾಗಿದೆ. ಶಿವಮೊಗ್ಗ ನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಬಾಬು, ಬಾಲ್ಯದಿಂದಲೇ ಕರುಣೆ, ಕ್ರೀಡೆ, ಮಾನವೀಯತೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಂಡವರು. 

ಹತಾಶರು, ಅಸಹಾಯಕರು, ನೋವಿನಲ್ಲಿ ನರಳುವವರನ್ನು ಕಂಡಾಗ ಅವರ ಮನಸ್ಸು ಮೌನವಾಗಿರಲಿಲ್ಲ; ಅವರ ಸಂಕಷ್ಟಗಳನ್ನು ತನ್ನದೇ ಎಂದು ಭಾವಿಸಿ ನೆರವಾಗುವ ದಾರಿಯತ್ತ ಹೆಜ್ಜೆಯಿಟ್ಟಿತು.
ಜಾತಿ, ಮತ, ಧರ್ಮ ಎಂಬ ಗೋಡೆಗಳನ್ನು ಮೀರಿ ಎಲ್ಲರನ್ನು ತನ್ನವರಂತೆ ಕಾಣುವ ಅವರ ಹೃದಯವಂತಿಕೆ ಇಂದು ಅಪರೂಪದ ಮೌಲ್ಯವಾಗಿದೆ. ಸಮಾಜದ ಲೆಕ್ಕಾಚಾರಗಳ ನಡುವೆ ಇಂತಹ ನಿಸ್ವಾರ್ಥ ಮನಸ್ಸುಗಳು ಬೆರಳೆಣಿಕೆಯಷ್ಟೇ ಎನ್ನುವುದು ನಿಜ.

ಕೆಲವು ವರ್ಷಗಳ ಕೆಳಗೆ ನಾನು ಮತ್ತು ಬಾಬಣ್ಣ ಕೆಲಸದ ಮೇಲೆ ಹೋಗುತ್ತಿದ್ದ ಸಂದರ್ಭ ಒಂದು ಕರೆ ಬರುತ್ತದೆ. ಒಂದು ಹಸು ಒಂದು ದಿನದಿಂದ ನೀರು ಆಹಾರ ಸೇವಿಸದೆ, ಪ್ರಸುತಿಯ ಕೊನೆಯ ಕ್ಷಣದಲ್ಲಿ ಕರುಗೆ ಜನುಮ ನೀಡಲು ಸಾಧ್ಯವಾಗದೆ ನರಳುತ್ತಿದೆ ಎಂದು. ತಕ್ಷಣ ಸ್ಥಳಕ್ಕೆ ಹೋದ ನಾವು ಆ ಕ್ಷಣದಲ್ಲಿ ಸಾರ್ಕ್ ಸಂಸ್ಥೆಯ ಪ್ರಸಾದ್ ಅವರಿಗೆ ಮಾಹಿತಿ ನೀಡುತ್ತೇವೆ. ಆಗ ನನ್ನ ಜೊತೆಯಲ್ಲಿದ್ದ ಬಾಬು ಅವರು ಇತರರ ಜೊತೆ ಕೈ ಜೋಡಿಸಿ ಹಸು ಮತ್ತು ಕರುವಿನ ಪ್ರಸೂತಿ ಮಾಡಿಸಿ, ಹಸು ಮತ್ತು ಕರುವಿನ ಜೀವವನ್ನು ಉಳಿಸುತ್ತಾರೆ. ಈ ಕೆಲಸಕ್ಕೆ ಸ್ಥಳೀಯರು ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. 

ಶಿವಮೊಗ್ಗ ಮಹಾನಗರ ಪಾಲಿಕೆಯ ನಗರ ಸ್ವಚ್ಛತಾ ಗುತ್ತಿಗೆ ಕಾರ್ಯದಲ್ಲಿ ಪಾಲುದಾರರಾಗಿರುವ ಚಿರಂಜೀವಿ ಬಾಬು, ನೂರಕ್ಕೂ ಹೆಚ್ಚು ಅರೆಕಾಲಿಕ ಪೌರಕಾರ್ಮಿಕರೊಂದಿಗೆ ಸೂರ್ಯ ಉದಾಯಿಸುವ ಮುನ್ನ ದಿನದ ಕಾರ್ಯ ಆರಂಭಿಸುತ್ತಾರೆ. ಆದರೆ ಅವರು ಕೇವಲ ಉದ್ಯೋಗದಾತರಲ್ಲ; ಕಾರ್ಮಿಕರ ಮನೆಮಾತಾದ ಆತ್ಮೀಯ ಬಂದು. ಅವರ ಕುಟುಂಬದ ಸಮಸ್ಯೆಗಳಿಗೆ ಸ್ಪಂದಿಸುವುದು, ಸಂಕಷ್ಟದಲ್ಲಿ ಕೈಹಿಡಿಯುವುದು, ಧೈರ್ಯ ತುಂಬುವುದು — ಇವೆಲ್ಲವೂ ಬಾಬಣ್ಣರವರ ಮಾನವೀಯ ಮುಖವನ್ನು ತೋರಿಸುತ್ತವೆ.
ರಂಗನಾಥ ಬಡಾವಣೆ, ತುಂಗಾನಗರ, ಅಣ್ಣಾನಗರ, ಜಿ.ಪಿ ನಗರ, ಟಿಪ್ಪುನಗರ, ಮಿಳ್ಳಘಟ್ಟ ಸೇರಿದಂತೆ ನಗರದ ಹಲವೆಡೆ “ಬಾಬಣ್ಣ” ಎಂಬ ಹೆಸರು ಜನಮನಗಳಲ್ಲಿ ಅಚ್ಚೊತ್ತಿದೆ. ರಾಜಕೀಯದ ಆಸೆ ಇಲ್ಲ, ಪ್ರಚಾರದ ಹುಚ್ಚಿಲ್ಲ, ಓಲೈಕೆಯ ಮಾತಿಲ್ಲ. ಆದರೆ ಬಡವರ ಮನೆಗಳಲ್ಲಿ ಮದುವೆ, ಶುಭಕಾರ್ಯ ನಡೆಯುವಾಗ ಮೊದಲಿಗನಾಗಿ ಓಡಾಡುವ ಮನಸ್ಸು ಅವರದ್ದು.

ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದ ಇಬ್ಬರು ರೋಗಿಗಳಿಗೆ ವರ್ಷಗಳಿಂದ ನಿರಂತರ ಡಯಾಲಿಸಿಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ರಕ್ತದಾನ ಶಿಬಿರಗಳನ್ನು ಆಯೋಜಿಸಿ ಅನೇಕ ಜೀವಗಳಿಗೆ ರಕ್ತದ ಆಶಾಕಿರಣವಾಗಿದ್ದಾರೆ. ಅನಾಥ ಶವಗಳಿಗೂ ಧರ್ಮಾನುಸಾರ ಅಂತ್ಯಕ್ರಿಯೆ ನೆರವೇರಿಸುವ ಮಾನವೀಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಜಿ.ಪಿ ನಗರದಲ್ಲಿ ಮಳೆನೀರಿನ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಇಡೀ ಪ್ರದೇಶದ ಜನರಿಗೆ ದಿನಗಟ್ಟಲೆ ಸಾಮೂಹಿಕ ಊಟದ ವ್ಯವಸ್ಥೆ ಕಲ್ಪಿಸಿ ಮಾನವೀಯತೆಯ ಮತ್ತೊಂದು ಮುಖ ತೋರಿಸಿದರು. ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಪುಸ್ತಕ ವಿತರಣೆ ಮಾಡುವ ಮೂಲಕ ಶಿಕ್ಷಣದ ಬೆಳಕು ಹಚ್ಚುತ್ತಿದ್ದಾರೆ.
ಪರಿಸರ ಪ್ರೀತಿಯಲ್ಲೂ ಅವರು ಮಾದರಿ. ಕಳೆದ ಹಲವು ವರ್ಷಗಳಿಂದ ರಂಗನಾಥ ಬಡಾವಣೆಯ ರಸ್ತೆಗಳ ಇಕ್ಕೆಲಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಪೋಷಿಸಿದ್ದಾರೆ. ಇಂದು ಆ ಗಿಡಗಳು ದೊಡ್ಡ ಮರಗಳಾಗಿ ನೆರಳು ನೀಡುತ್ತಿವೆ. ಅಲ್ಲಿನ ನೂತನ ಪಾಲಿಕೆ ಉದ್ಯಾನವನಕ್ಕೂ ಗಿಡಗಳನ್ನು ನೆಟ್ಟು ಮಕ್ಕಳ ಆಟಿಕೆಗಳನ್ನು ಅಳವಡಿಸಿ, ಆ ಪಾರ್ಕ್‌ನ್ನು ಮಕ್ಕಳ ನಗುವಿನ ತಾಣವನ್ನಾಗಿ ಮಾಡಿದ್ದಾರೆ. ಸ್ಥಳೀಯರು ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಪಾರ್ಕ್ ಅಂತ ಇವರ ತಂಡ ನಾಮಕರಣ ಮಾಡಿದ್ದರು ಸಹ ಆ ಪಾರ್ಕ್ ಗೆ ಪ್ರೀತಿಯಿಂದ ಅದನ್ನು “ಬಾಬು ಪಾರ್ಕ್” ಎಂದೇ ಕರೆಯಲು ಆರಂಭಿಸಿದ್ದಾರೆ.

ಎಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಇರುತ್ತದೆಯೋ ಅಲ್ಲಿ ಜನರ ಪ್ರೀತಿ ಸಹಜವಾಗಿ ಹರಿದುಬರುತ್ತದೆ. ಅದೇ ಕಾರಣಕ್ಕೆ ನೂರಾರು ಯುವಕರಿಗೆ ಚಿರಂಜೀವಿ ಬಾಬು ಇಂದು ಪ್ರೇರಣೆಯಾಗಿದ್ದಾರೆ. ಸ್ನೇಹಿತರು ಅವರನ್ನು “ಆಪ್ತಮಿತ್ರ” ಎಂದು ಕರೆಯುವುದು ಅಚ್ಚರಿಯಲ್ಲ.
ತಮ್ಮ ವ್ಯವಹಾರದಿಂದ ಬಂದ ಆದಾಯವನ್ನು ಸಮಾಜ ಸೇವೆಗೆ ಬಳಸುವ ಬಾಬುರವರಿಗೆ ಯಾವುದೇ ರಾಜಕೀಯ ಸ್ಥಾನಮಾನ ಬೇಕಿಲ್ಲ. ಸೇವೆಯಲ್ಲೇ ಸಂತೋಷ ಕಂಡುಕೊಂಡಿರುವ ಈ ಯುವ ಹೃದಯ, ಯಾವುದೇ ನೋಟಂಕಿ ಇಲ್ಲದೆ, ಪ್ರಚಾರದ ಬೆಳಕು ಹುಡುಕದೆ, ಮೌನವಾಗಿ ಮಾನವೀಯತೆಯ ದೀಪ ಹಚ್ಚುತ್ತಲೇ ಸಾಗುತ್ತಿದೆ.

ಸಮಾಜದಲ್ಲಿ ಇನ್ನೂ ಮಾನವೀಯತೆ ಜೀವಂತವಾಗಿದೆ ಎಂಬುದಕ್ಕೆ ಆಂತೋಣಿ ಚಿರಂಜೀವಿ ಬಾಬು ಬದುಕೇ ಒಂದು ಸ್ಪಂದಿಸುವ ಸಾಕ್ಷಿ. ಇಂತಹ ಹೃದಯವಂತ ಯುವಕರಿಗೆ ಸಮಾಜದ ಆಶೀರ್ವಾದ ಮತ್ತು ಜನರ ಪ್ರೀತಿ ಸದಾ ರಕ್ಷೆಯಾಗಲಿ. ಹುಟ್ಟುಹಬ್ಬದ ಶುಭಾಶಯಗಳು ಅಂತೋನಿ ಚಿರಂಜೀವಿ ಬಾಬು (ಬಾಬಣ್ಣ).

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ