ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿ
ಶಿವಮೊಗ್ಗ: ಪ್ರತಿಯೊಬ್ಬರೂ ರಾಷ್ಟ್ರದ ಪ್ರಗತಿಗೆ ಕೈಜೋಡಿಸಬೇಕು. ದೇಶಭಕ್ತಿಯು ಮಾತೃಭಕ್ತಿಗೆ ಸಮ ಎಂದು ಲೆಫ್ಟಿನೆಂಟ್ ಕರ್ನಲ್ ದಿವಾಕರ ನಾಯ್ಡು ಹೇಳಿದರು.
ಆಚಾರ್ಯ ತುಳಸಿ ರಾಷ್ಟ್ರೀಯ ಕಾಲೇಜಿನ ಹಿರಿಯ ವಿದ್ಯಾರ್ಥಿ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಮಾತನಾಡಿ, ದೇಶದ ಪ್ರತಿಯೊಬ್ಬ ಉತ್ತಮ ಮನೋಭಾವದಿಂದ ಜೀವನ ನಡೆಸಬೇಕು. ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಕಾಲೇಜು ದಿನಗಳಲ್ಲಿ ಎನ್‌ಸಿಸಿ ಸೇರಿ ಮಿಲ್ಟ್ರಿ ಕ್ಯಾಂಪ್‌ನಲ್ಲಿ ತರಬೇತಿ ಪಡೆದ ನಂತರ ದೇಶಕ್ಕಾಗಿ ಸೇವೆ ಸಲ್ಲಿಸಿದೆ. ನಾನು ಓದಿದ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಸನ್ಮಾನಿಸಿಕೊಳ್ಳುತ್ತಿರುವುದು ಬಹಳ ಸಂತೋಷ ತಂದಿದೆ. ಪ್ರಾಧ್ಯಾಪಕರು ನೀಡಿದ ವಿದ್ಯಾಭ್ಯಾಸ, ನೆರವು ಎಂದಿಗೂ ಮರೆಯಲಾರೆ. ನಿವೃತ್ತಿ ನಂತರ 'ದಿ ಕರ್ಮಭೂಮಿ ಪೌಂಡೇಷನ್' ಸ್ಥಾಪಿಸಿ, ಸ್ವಂತ ಆದಾಯವನ್ನು ಬಡವರಿಗೆ ನೆರವಿನ ರೂಪದಲ್ಲಿ ಹಂಚುತ್ತಿದ್ದೇನೆ. ಈಗಾಗಲೇ ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಸಹಾಯ ನೀಡಿದ್ದೇವೆ ಎಂದರು.
ವಿದ್ಯಾರ್ಥಿ ಬಳಗದ ಅಧ್ಯಕ್ಷ ವಾಗೀಶ್ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗಾಗಿ ವಾಣಿಜ್ಯ ಪದವಿ ಕಾಲೇಜ್ ಪ್ರಾರಂಭಿಸಿದ್ದರು. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಯಶಸ್ವಿ ಉದ್ಯಮಿಗಳು, ರೈತರು, ಲೆಕ್ಕಪರಿಶೋದಕರು ರಾಜಕಾರಣಿಗಳನ್ನು ಸಮಾಜಕ್ಕೆ ಕೊಡುಗೆ ನೀಡಿದ ಹೆಮ್ಮೆ ನಮ್ಮ ಕಾಲೇಜಿಗೆ ಇದೆ. ಪ್ರತಿ ವರ್ಷ ಮೇ 1ರಂದು ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿ ಸಂಘ ಸ್ನೇಹ ಮಿಲನ ಸಮಾರಂಭ ಏರ್ಪಡಿಸುತ್ತದೆ ಎಂದು ತಿಳಿಸಿದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಎಲ್ಲಾ ರಂಗದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ವೇದಿಕೆಯಲ್ಲಿರುವ ಎಲ್ಲರೂ ವೈವಿಧ್ಯತೆಯಿಂದ ಕೂಡಿದ ಕಾರ್ಯಗಳಿಂದ ವಿಶ್ವದ ಗಮನ ಸೆಳೆದು, ರಾಜ್ಯ, ರಾಷ್ಟ್ರಕ್ಕೆ ಕೊಡುಗೆ ನೀಡಿದ್ದಾರೆ. ವಾಣಿಜ್ಯ ಪದವಿ ಪಡೆದವರು ಸೈನ್ಯಕ್ಕೆ ಸೇರಿ, ಲೆಪ್ಟಿನೆಂಟ್ ಕರ್ನಲ್ ಆಗಿದ್ದಾರೆ. ರೈತ ಮುಖಂಡರು, ರಾಜಕಾರಣಿ ಹಾಗೂ ಅಮೇರಿಕ ದೇಶದ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾರೆ ಎಂದು ಹೇಳಿದರು.
ಆಶಾಲತಾ, ಮಂಜುನಾಥ್, ಸಮನ್ವಯ ಕಾಶಿ, ಶಿವಾನಂದ ಸಾನು, ಸ್ಮಿತಾ ರೂಪೇಶ್, ಘನಶ್ಯಾಮ್, ಕೇಶವಮೂರ್ತಿ, ಜಿ.ವಿಜಯಕುಮಾರ್, ಮಹೇಶ್, ದಿಲೀಪ್ ನಾಡಿಗ್, ಸುನೀಲ್, ಅಭಿಷೇಕ್, ನವೀನ್ ಹಾಗೂ ನೂರಾರು ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ