ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡಾಸಂಕೀರಣದಲ್ಲಿ ಉದ್ವಿಗ್ನ ವಾತಾವರಣ: ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಆರೋಪ
ಶಿವಮೊಗ್ಗ, ಮೇ 08: ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಸಂಕೀರಣದಲ್ಲಿ ಶುಕ್ರವಾರ ಸಂಜೆ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ ಎನ್ನಲಾಗಿದೆ.
ಕ್ರೀಡಾಸಂಕೀರಣದ ಸಹಾಯಕ ನಿರ್ದೇಶಕರ ಆದೇಶದಂತೆ ಸದಸ್ಯತ್ವ ನವೀಕರಣ ಕುರಿತು ಹಲವು ಬಾರಿ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಮೇ 2, 2026 ಅನ್ನು ಅಂತಿಮ ದಿನಾಂಕವಾಗಿ ನಿಗದಿಪಡಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಆದರೆ, ಸದಸ್ಯತ್ವ ನವೀಕರಣ ಪ್ರಕ್ರಿಯೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಮಲೆನಾಡು ಸ್ವಿಮ್ಮಿಂಗ್ ಅಸೋಸಿಯೇಷನ್ ಸದಸ್ಯರು ಹಾಗೂ ಕಾರ್ಯದರ್ಶಿ ವಿಜಯ್ ಕುಮಾರ್ ಅವರ ಮಕ್ಕಳ ಪ್ರವೇಶಕ್ಕೆ ನಿಯಮಾನುಸಾರ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು ಎನ್ನಲಾಗಿದೆ.
ಈ ವೇಳೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳಾದ ಶಿವು ಮತ್ತು ಸಚಿನ್ ಅವರೊಂದಿಗೆ ವಾಗ್ವಾದ ನಡೆದು, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಘಟನೆ ಕುರಿತು ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತಿದೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ