ಡೆಂಗ್ಯೂ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯ: ಡಾ. ಗುಡದಪ್ಪ ಕಸಬಿ


ಶಿವಮೊಗ್ಗ: ಡೆಂಗ್ಯೂ ಸೇರಿದಂತೆ ಕೀಟಜನ್ಯ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರ ಜಾಗೃತಿ ಹಾಗೂ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ ಹೇಳಿದರು.

ನಗರದ ವಿನೋಬನಗರದ ಹಳೆ ಜೈಲು ಆವರಣದಲ್ಲಿರುವ ವಿಶೇಷ ಪೊಲೀಸ್ ಭದ್ರತಾ ಪಡೆ–ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಆವರಣದಲ್ಲಿ ಜಿಲ್ಲಾ ಆಡಳಿತ ಹಾಗೂ ಜಿ.ಪಂ. ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಡೆಂಗ್ಯೂ ಜಾಗೃತಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಡೆಂಗ್ಯೂ, ಮಲೇರಿಯಾ, ಚಿಕುನ್‌ಗುನ್ಯಾ, ಜೀಕಾ ಹಾಗೂ ಆನೆಕಾಲು ರೋಗಗಳ ತಡೆಗೆ ಸೊಳ್ಳೆಗಳ ಉತ್ಪತ್ತಿ ತಡೆಯುವುದು ಅತ್ಯಂತ ಮುಖ್ಯವಾಗಿದೆ. ಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆ ಪರದೆ, ಸೊಳ್ಳೆ ನಿವಾರಕಗಳ ಬಳಕೆ ಹಾಗೂ ಪೂರ್ಣ ತೋಳಿನ ಬಟ್ಟೆ ಧರಿಸುವ ಮೂಲಕ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಈ ವರ್ಷದ ಘೋಷವಾಕ್ಯ “ಡೆಂಗ್ಯೂ ನಿಯಂತ್ರಣಕ್ಕಾಗಿ ಸಮುದಾಯದ ಭಾಗವಹಿಸುವಿಕೆ: ಪರಿಶೀಲಿಸಿ, ಸ್ವಚ್ಛಗೊಳಿಸಿ ಮತ್ತು ಮುಚ್ಚಿ” ಎಂಬುದಾಗಿದ್ದು, ಡೆಂಗ್ಯೂ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು. ಸರ್ಕಾರವು ವರ್ಧಿತ ಕಣ್ಗಾವಲು, ಪರೀಕ್ಷೆ, ಚಿಕಿತ್ಸಾ ಸೌಲಭ್ಯಗಳು ಹಾಗೂ ಜಾಗೃತಿ ಅಭಿಯಾನಗಳ ಮೂಲಕ ಡೆಂಗ್ಯೂ ನಿಯಂತ್ರಣ ಕ್ರಮಗಳನ್ನು ಬಲಪಡಿಸುತ್ತಿದೆ ಎಂದರು.

ಆರೋಗ್ಯ ಇಲಾಖೆಯ ಹೆಲ್ತ್ ವಿಸಿಟರ್ ರಾಮಚಂದ್ರ ಅವರು ಕ್ಷಯರೋಗ ನಿಯಂತ್ರಣ ಹಾಗೂ ಔಷಧಿಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡ ವೀರಪ್ಪ ಅವರು ಮಲೇರಿಯಾ ಹಾಗೂ ಇತರೆ ಕೀಟಜನ್ಯ ರೋಗಗಳ ಬಗ್ಗೆ ಜಾಗೃತಿ ಮೂಡಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯ್ ಕುಮಾರ್ ಮಾತನಾಡಿ, ವೈರಲ್ ಸೋಂಕುಗಳಿಗೆ ಪ್ರತಿಜೀವಕಗಳು ಪರಿಣಾಮಕಾರಿಯಾಗುವುದಿಲ್ಲ. ಉತ್ತಮ ಆರೋಗ್ಯ, ವಿಶ್ರಾಂತಿ ಹಾಗೂ ಲಸಿಕೆಗಳ ಮೂಲಕ ರೋಗಗಳಿಂದ ರಕ್ಷಿಸಿಕೊಳ್ಳಬಹುದು ಎಂದು ತಿಳಿಸಿದರು.

ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಾಕೀರ್ ಹುಸೇನ್ ಅವರು ಈಡಿಸ್ ಈಜಿಪ್ಟಿ ಸೊಳ್ಳೆಯಿಂದ ಡೆಂಗ್ಯೂ ಹರಡುತ್ತದೆ. ಹಠಾತ್ ಜ್ವರ, ಕೀಲು ನೋವು, ಸ್ನಾಯು ನೋವು ಹಾಗೂ ಚರ್ಮದ ಮೇಲೆ ದದ್ದುಗಳು ಕಾಣಿಸಿಕೊಳ್ಳುವುದು ಡೆಂಗ್ಯೂ ಲಕ್ಷಣಗಳಾಗಿವೆ ಎಂದು ವಿವರಿಸಿದರು. ಜೊತೆಗೆ ಕ್ಯುಲೆಕ್ಸ್ ಸೊಳ್ಳೆಯಿಂದ ಹರಡುವ ಆನೆಕಾಲು ರೋಗದ ಕುರಿತು ಮಾಹಿತಿ ನೀಡಿದರು.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಉಮಾ ಮಧುಮೇಹ, ರಕ್ತದೊತ್ತಡ ಹಾಗೂ ಕ್ಯಾನ್ಸರ್ ಸೇರಿದಂತೆ ಅಸಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸಿದರು.

ಕಾರ್ಯಕ್ರಮದ ಅಂಗವಾಗಿ ವಿಶೇಷ ಭದ್ರತಾ ಪಡೆ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಔಷಧಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಕೀರ್ತಿ ಕುಮಾರ್, ಲೆಕ್ಕ ಪರಿಶೋಧಕ ಆರ್. ಮನೋಹರ, ಪ್ರಭಾರ ಆರೋಗ್ಯ ಮೇಲ್ವಿಚಾರಕ ರಾಜು, ಸಹಾಯಕ ಕೀಟಶಾಸ್ತ್ರಜ್ಞ ರೂಪಿಣಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಧೀರೇಂದ್ರ ಎಂ.ಎನ್., ಶಶಿಕುಮಾರ್ ಟಿ.ಎಂ., ಗಿರೀಶ್ ಆರ್.ಎಸ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ