ಮಂಗಳೂರಿಗೆ ಸಮಗ್ರ ಒಳಚರಂಡಿ ಯೋಜನೆ ಅತ್ಯಗತ್ಯ : ಟಿ. ರಘುಮೂರ್ತಿ
ಮಂಗಳೂರು : ಕರಾವಳಿ ನಗರ ಮಂಗಳೂರಿನ ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಸಮಗ್ರ ಒಳಚರಂಡಿ ವ್ಯವಸ್ಥೆ ಅತ್ಯಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ತಿಳಿಸಿದ್ದಾರೆ.
ವಿಧಾನಮಂಡಲ ಸಾರ್ವಜನಿಕ ಉದ್ಯಮಗಳ ಸಮಿತಿಯ ಸದಸ್ಯರೊಂದಿಗೆ ಮಂಗಳೂರಿನ ರಾಜಕಾಲುವೆಗಳು, ನದಿಗಳು ಹಾಗೂ ಒಳಚರಂಡಿ ತ್ಯಾಜ್ಯ ಹರಿಯುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.
ನಗರದಲ್ಲಿ ಹಲವೆಡೆ ಶುದ್ಧೀಕರಣವಿಲ್ಲದ ಒಳಚರಂಡಿ ನೀರು ನೇರವಾಗಿ ನದಿಗಳು ಮತ್ತು ಕಾಲುವೆಗಳಿಗೆ ಸೇರುತ್ತಿರುವುದು ಗಂಭೀರ ಪರಿಸ್ಥಿತಿಯನ್ನು ಉಂಟುಮಾಡಿದೆ. ಮಂಗಳೂರಿನ ವೇಗವಾದ ನಗರೀಕರಣ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ₹1250 ಕೋಟಿ ವೆಚ್ಚದ ಸಮಗ್ರ ಒಳಚರಂಡಿ ಯೋಜನೆ ಜಾರಿಗೊಳಿಸುವ ಅಗತ್ಯವಿದೆ ಎಂದು ಹೇಳಿದರು.
ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಡಳಿತ ಸರ್ಕಾರಕ್ಕೆ ಈಗಾಗಲೇ ಸಮಗ್ರ ಯೋಜನಾ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಯೋಜನೆಗೆ ಸರ್ಕಾರದ ಅನುಮೋದನೆ ದೊರಕುವ ನಿಟ್ಟಿನಲ್ಲಿ ಸಾರ್ವಜನಿಕ ಉದ್ಯಮಗಳ ಸಮಿತಿ ವತಿಯಿಂದ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಕೈಗೊಳ್ಳಲಾದ ಒಳಚರಂಡಿ ಕಾಮಗಾರಿಗಳ ಗುಣಮಟ್ಟ, ನ್ಯೂನತೆಗಳು ಹಾಗೂ ಲೋಪದೋಷಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಕಾಮಗಾರಿಗಳಲ್ಲಿ ನಿರ್ಲಕ್ಷ್ಯ ಅಥವಾ ಅವ್ಯವಹಾರ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.
ನಗರದ ನದಿಗಳು ಮತ್ತು ರಾಜಕಾಲುವೆಗಳ ಮಾಲಿನ್ಯ ತಡೆಯುವುದು, ಸಾರ್ವಜನಿಕ ಆರೋಗ್ಯ ಕಾಪಾಡುವುದು ಹಾಗೂ ಭವಿಷ್ಯದ ಅಭಿವೃದ್ಧಿಗೆ ಪೂರಕ ಮೂಲಸೌಕರ್ಯ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಉದ್ಯಮಗಳ ಸಮಿತಿ ಸದಸ್ಯರು ಹಾಗೂ ಶಾಸಕರಾದ ಜಿ.ಕೆ. ವೆಂಕಟೇಶ್ ರೆಡ್ಡಿ, ಕೃಷ್ಣಪ್ಪ, ಶಂಕರಗೌಡ, ಎಸ್. ಮುನಿರಾಜು, ಐವನ್ ಡಿಸೋಜ, ಟಿ.ಎನ್. ಜವರಾಯ, ಕಿಶೋರ್ ಕುಮಾರ್ ಪುತ್ತೂರು, ಚಂದ್ರೇಗೌಡ, ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ