ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಎಸ್‌ಸಿಐ ಕೊಡುಗೆ ಅಪಾರ
ಶಿವಮೊಗ್ಗ: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸಂಸ್ಥೆಯು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿದೆ ಎಂದು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ ಎಂ.ಆರ್.ಜಯೇಶ್ ಹೇಳಿದರು.
ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಶಿವಮೊಗ್ಗ ಸಂಧ್ಯಾಯಾನ ಲೀಜನ್ ವತಿಯಿಂದ ಆಯೋಜಿಸಿದ್ದ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿರುವ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆ ಇದಾಗಿದೆ. ದೇಶ ವಿದೇಶಗಳಲ್ಲಿ ಶಾಖೆಗಳನ್ನು ಹೊಂದಿದ್ದು, 5000ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ ಎಂದು ತಿಳಿಸಿದರು.
40 ವರ್ಷ ಮೇಲ್ಪಟ್ಟವರು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸೇರಬಹುದು. ಸಮಾಜದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಬಹುದು. ಹೆಚ್ಚು ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಬೇಕು ಎಂದು ಹೇಳಿದರು.
ಸೀನಿಯರ್ ಸೆನೆಟರ್ ಡಾ. ಎಸ್.ವಿ.ಶಾಸ್ತ್ರಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಶಾಖೆಗಳನ್ನು ಆರಂಭಿಸಬೇಕು. ಮುಂದಿನ ಪೀಳಿಗೆಗೆ ಉತ್ತಮ ಸಮಾಜ ನಿರ್ಮಾಣ ಮಾಡಬೇಕು. 17 ವರ್ಷದ ಹಿಂದೆ ಮೊದಲ ಬಾರಿ ಎಸ್‌ಸಿಐ ಘಟಕ ಸ್ಥಾಪನೆ ಮಾಡಲಾಗಿತ್ತು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಹಿರಿಯರ ಅನುಭವ ಮತ್ತು ಮಾರ್ಗದರ್ಶನ ಯುವಪೀಳಿಗೆಗೆ ಅಗತ್ಯವಾಗಿದೆ. ಎಸ್‌ಸಿಐ ಸಂಸ್ಥೆ ಉತ್ತಮ ಸೇವಾ ಕಾರ್ಯಗಳನ್ನು ನಡೆಸುತ್ತಿದೆ ಎಂದು ಹೇಳಿದರು.
ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಶಿವಮೊಗ್ಗ ಸಂಧ್ಯಾಯಾನ ಲೀಜನ್ ನೂತನ ಅಧ್ಯಕ್ಷ ಪ್ರೊ. ಪ್ರಕಾಶ್ ಚುಳ್ಕಿ ಅಧಿಕಾರ ಸ್ವೀಕರಿಸಿದರು. ಡಾ. ಕೆ.ಜಿ.ಸಿದ್ದಯ್ಯ ಅಧ್ಯಕ್ಷರ ಅಧಿಕಾರ ಹಸ್ತಾಂತರ ಮಾಡಿದರು. ರಾಜು ನರಸಯ್ಯ ಕಾರ್ಯದರ್ಶಿಯಾಗಿ, ರಾಜಗೋಪಾಲ ರಾವ್ ಉಪಾಧ್ಯಕ್ಷರಾಗಿ ಹಾಗೂ ಬಿ.ಜಿ.ಪರಮೇಶ್ವರ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು. ಟಿ.ಕರುಣಾಕರ ರಾವ್ 2025-26ನೇ ಸಾಲಿನ ವರದಿ ಮಂಡಿಸಿದರು.
ಎಸ್‌ಸಿಐ ರಾಷ್ಟ್ರೀಯ ಉಪಾಧ್ಯಕ್ಷೆ ಕೆ.ಎಸ್.ಶಶಿಕಲಾ, ಎಚ್.ಎನ್.ಸೂರ್ಯನಾರಾಯಣ, ಡಾ. ಕೆ.ಜಿ.ಮಹೇಶ್ವರಪ್ಪ, ಎಸ್.ಅಮಿತ್, ಶಂಕರ ನಾಯ್ಕ್, ಡಾ. ಎಚ್.ಡಿ.ಮೋಹನಕುಮಾರ್, ಆರ್.ಜಿ.ಮಹೇಶ್ವರಪ್ಪ, ಬಸವರಾಜ್ ಅಣಜಿ, ಗುರುರಾಜ್, ಐಸಿರಿ ಅಮಿತ್ ಮತ್ತಿತರರು ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ