ರಾಜ್ಯದಲ್ಲಿ ಕಲುಷಿತ ನೀರಿನ ಆತಂಕ: ಪ್ರತಿ ಜಿಲ್ಲೆಯಲ್ಲೂ NABL ಮಾನ್ಯತೆ ಪಡೆದ ಲ್ಯಾಬ್ ಸ್ಥಾಪನೆಗೆ ಡಾ. ಧನಂಜಯ ಸರ್ಜಿ ಆಗ್ರಹ


ಬೆಂಗಳೂರು: ರಾಜ್ಯದಲ್ಲಿ ಕುಡಿಯುವ ನೀರಿನ ಗುಣಮಟ್ಟ ಕುಸಿಯುತ್ತಿದ್ದು, ಹರಡುತ್ತಿರುವ ಸಾಂಕ್ರಾಮಿಕ ರೋಗಗಳ ತಡೆಗೆ ಸರ್ಕಾರ  ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರು ಸರ್ಕಾರವನ್ನು ಒತ್ತಾಯಿಸಿದರು. ಇಂದು ವಿಧಾನ ಪರಿಷತ್ತಿನಲ್ಲಿ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರಿಗೆ ಪ್ರಶ್ನೆ ಕೇಳಿದ ಅವರು, ಸಚಿವರ ಅಸ್ಪಷ್ಟ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿ ರಾಜ್ಯದ ನೀರಿನ ಭೀಕರ ವಾಸ್ತವಾಂಶಗಳನ್ನು ಅಂಕಿಅಂಶಗಳ ಸಮೇತ ಮಾತನಾಡಿದರು. 

     ಕೇಂದ್ರ ಆರೋಗ್ಯ ಸಚಿವಾಲಯದ ವರದಿಯನ್ನು ಉಲ್ಲೇಖಿಸಿದ ಡಾ. ಸರ್ಜಿ, "ಟೈಫಾಯಿಡ್ ಪ್ರಕರಣಗಳಲ್ಲಿ ಕರ್ನಾಟಕ ದೇಶದಲ್ಲೇ 3ನೇ ಸ್ಥಾನದಲ್ಲಿದ್ದರೆ, ಅತಿಸಾರ ಭೇದಿ ಪ್ರಕರಣಗಳಲ್ಲಿ 5ನೇ ಸ್ಥಾನದಲ್ಲಿದೆ. 2021ರಲ್ಲಿ 3.3 ಲಕ್ಷ ಅತಿಸಾರ ಭೇದಿ ಹಾಗೂ 3,021 ಟೈಫಾಯಿಡ್ ಪ್ರಕರಣಗಳು ವರದಿಯಾಗಿವೆ. ಕಳೆದ ಐದು ವರ್ಷಗಳಲ್ಲಿ 8,697 ಇಲಿ ಜ್ವರ (ಲೆಪ್ಟೊಸ್ಪೈರೋಸಿಸ್) ಪ್ರಕರಣಗಳು ದಾಖಲಾಗಿದ್ದು, ಸರಾಸರಿ ವರ್ಷಕ್ಕೆ 1,739 ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕಕಾರಿ," ಎಂದು ವಿವರಿಸಿದರು.

     ನೈಟ್ರೇಟ್ ಮತ್ತು ಫ್ಲೋರೈಡ್ ಮಾಲಿನ್ಯದಲ್ಲಿ ಮುಂಚೂಣಿ: ದೇಶದ ನೈಟ್ರೇಟ್ ಮಾಲಿನ್ಯದಲ್ಲಿ ರಾಜಸ್ಥಾನ (49%) ಪ್ರಥಮ ಸ್ಥಾನದಲ್ಲಿದ್ದರೆ, ಕರ್ನಾಟಕ 48% ರೊಂದಿಗೆ ಎರಡನೇ ಸ್ಥಾನದಲ್ಲಿದೆ. ತಮಿಳುನಾಡು 37% ರಷ್ಟಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಗ್ರಹಿಸಲಾದ ನೀರಿನ ಮಾದರಿಗಳಲ್ಲಿ 1,647 ಫ್ಲೋರೈಡ್ ಮತ್ತು 3,129 ನೈಟ್ರೇಟ್ ಅಶುದ್ಧತೆ ಕಂಡುಬಂದಿದೆ. 2023-24ರಲ್ಲಿ ಪರೀಕ್ಷಿಸಲಾದ ಮಾದರಿಗಳಲ್ಲಿ 4,670 ಬ್ಯಾಕ್ಟೀರಿಯಾ ಹಾಗೂ 24,917 ರಾಸಾಯನಿಕ ಮಾಲಿನ್ಯ ಪತ್ತೆಯಾಗಿದೆ. 2024-25ರಲ್ಲೂ ಈ ಪ್ರಮಾಣ ಗಣನೀಯವಾಗಿದೆ ಎಂದು ಅವರು ಅಂಕಿಅಂಶ ನೀಡಿದರು. "ಒಂದು ಹಳ್ಳಿಗೆ ತಿಂಗಳಿಗೆ ಕನಿಷ್ಠ ಒಂದು ಬ್ಯಾಕ್ಟಿರಿಯಲ್ ಟೆಸ್ಟಿಂಗ್, ವರ್ಷಕ್ಕೆ ಒಂದು ಕೆಮಿಕಲ್ ಟೆಸ್ಟಿಂಗ್ ಹಾಗೂ ಫ್ಲ್ಯೂರೈಡ್-ಆರ್ಸಿನಿಕ್ ಪರೀಕ್ಷೆಗಳನ್ನು ನಡೆಸಬೇಕು. ಜನಸಂಖ್ಯೆಗೆ ಅನುಗುಣವಾಗಿ (10 ಲಕ್ಷಕ್ಕೂ ಅಧಿಕ ಜನಸಂಖ್ಯೆಗೆ ತಿಂಗಳಿಗೆ 100 ಸ್ಯಾಂಪಲ್) ಪರೀಕ್ಷೆ ನಡೆಯಬೇಕು. ಅಲ್ಲದೆ, ವಾರ್ಷಿಕ ಬಜೆಟ್‌ನ 2% ಹಣವನ್ನು ನೀರಿನ ಸ್ಯಾಂಪಲ್ ಪರೀಕ್ಷೆಗೆ ಮೀಸಲಿಡಬೇಕು ಎಂಬ ನಿಯಮವಿದೆ. ಈ ಬಾರಿ ಬಜೆಟ್‌ನಲ್ಲಿ ಎಷ್ಟು ಹಣ ಮೀಸಲಿಟ್ಟಿದ್ದೀರಿ?" ಎಂದು ಸಚಿವರನ್ನು ಪ್ರಶ್ನಿಸಿದರು. 

        ಫ್ಲೋರೈಡ್ ಹೆಚ್ಚು ಇರುವ ನೀರು ದೀರ್ಘಕಾಲ ಕುಡಿಯುವುದರಿಂದ ಜನರಲ್ಲಿ ಹಲ್ಲು ಹಾಳಾಗುವುದು ಮಾತ್ರವಲ್ಲ, ಎಲುಬು ಗಟ್ಟಿಯಾಗುವುದು, ಸಂಧಿ ನೋವು ಮತ್ತು ಶಾಶ್ವತ ಅಂಗವೈಕಲ್ಯಕ್ಕೂ ಕಾರಣವಾಗುವ ಫ್ಲೋರೋಸಿಸ್ ಎಂಬ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುತ್ತದೆ, ಮಕ್ಕಳಲ್ಲಿ ಹಲ್ಲುಗಳ ಮೇಲೆ ಬಿಳಿ ಅಥವಾ ಕಂದು ಕಲೆಗಳು ಮೂಡುವುದು, ನರಗಳ ದುರ್ಬಲತೆಯಿಂದ ಕಲಿಕಾ ನ್ಯೂನತೆ, ಕೈಕಾಲುಗಳಲ್ಲಿ ಮರಗಟ್ಟುವಿಕೆ, ಸ್ನಾಯುಗಳ ಬಿಗಿತ, ಮೂತ್ರಪಿಂಡದ (ಕಿಡ್ನಿ) ಕಾರ್ಯಕ್ಷಮತೆ ಕುಸಿತ, ಜೀವಕೋಶಗಳ ಮಟ್ಟದಲ್ಲಿ ಡಿಎನ್‌ಎ (DNA) ಹಾಗೂ ಪ್ರೋಟೀನ್ ಹಾನಿ ಸಂಭವಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು

        ಶಿವಮೊಗ್ಗ ಮತ್ತು ಮಂಗಳೂರು ಪಾಲಿಕೆಗಳ ವ್ಯಾಪ್ತಿಯಲ್ಲಿ ಒಂದೂ NABL (National Accreditation Board for Testing and Calibration Laboratories) ಮಾನ್ಯತೆ ಪಡೆದ ಪ್ರಯೋಗಾಲಯಗಳಿಲ್ಲದಿರುವುದನ್ನು ಹೇಳಿದ ಡಾ. ಸರ್ಜಿ , ಪ್ರತಿ ಜಿಲ್ಲೆಯಲ್ಲೂ ನೀರಿನ ಗುಣಮಟ್ಟ ಪರೀಕ್ಷಿಸಲು NABL ಮಾನ್ಯತೆ ಪಡೆದ ಸುಸಜ್ಜಿತ ಪ್ರಯೋಗಾಲಯ ಸ್ಥಾಪಿಸಬೇಕು, ಪ್ರತಿ ಜಿಲ್ಲೆಗೆ ಒಬ್ಬರಂತೆ ಬಯೋ ಕೆಮಿಸ್ಟ್‌ಗಳನ್ನು (Bio-Chemists) ಕೂಡಲೇ ನೇಮಕ ಮಾಡಬೇಕು, ಬಜೆಟ್‌ನಲ್ಲಿ ನೀರಿನ ಸರ್ವೇ ಮತ್ತು ಪರೀಕ್ಷೆಗೆ ಮೀಸಲಿಟ್ಟ ಅನುದಾನವನ್ನು ದುರುಪಯೋಗವಾಗದಂತೆ ಸರಿಯಾಗಿ ಬಳಸಬೇಕು, ರೈತರು ಬಳಸುವ ಕೀಟನಾಶಕಗಳ (Pesticides) ಅವಶೇಷಗಳು ನೀರಿನ ಮೂಲಗಳನ್ನು ಸೇರುತ್ತಿವೆಯೇ ಎಂಬ ಬಗ್ಗೆಯೂ ಪರೀಕ್ಷೆ ನಡೆಸಬೇಕು. ಇದು ರಾಜ್ಯದ ಜನರ ಜೀವದ ಪ್ರಶ್ನೆಯಾಗಿದ್ದು, ಸರ್ಕಾರ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡಬಾರದು," ಎಂದು ಡಾ. ಧನಂಜಯ ಸರ್ಜಿ ಅವರು ಸರ್ಕಾರಕ್ಕೆ ಆಗ್ರಹ ಪಡಿಸಿದರು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ