ಶಿವಮೊಗ್ಗ ತುಂಗಾನಗರ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಗೈರುಹಾಜರಿ: ತಕ್ಷಣ ಕ್ರಮಕ್ಕೆ ಆಗ್ರಹ

 


ಶಿವಮೊಗ್ಗ, ಮಾರ್ಚ್ 31: ಶಿವಮೊಗ್ಗ ನಗರದ 31ನೇ ವಾರ್ಡ್ ತುಂಗಾನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಖ್ಯ ವೈದ್ಯಾಧಿಕಾರಿ ಗೈರುಹಾಜರಿರುವುದು ಹಾಗೂ ವೈದ್ಯರ ನಿರ್ಲಕ್ಷ್ಯದಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಮನವಿ ಸಲ್ಲಿಸಲಾಗಿದೆ.

ಶಿವಮೊಗ್ಗ ಪೀಸ್ ಆರ್ಗನೈಸೇಶನ್(ರಿ) ವತಿಯಿಂದ ರಿಯಾಜ್ ಅಹಮದ್ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸೇವೆಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ದೂರಿದ್ದಾರೆ.

ಮನವಿಯಲ್ಲಿ ತಿಳಿಸಿರುವಂತೆ, ಮುಖ್ಯ ವೈದ್ಯಾಧಿಕಾರಿ ನಿಯಮಿತವಾಗಿ ಹಾಜರಾಗದೇ ಇರುವುದರಿಂದ ಅಸಿಸ್ಟೆಂಟ್ ಸಿಬ್ಬಂದಿಗಳೇ ಕಾರ್ಯನಿರ್ವಹಿಸುತ್ತಿದ್ದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಕೆಲವೊಮ್ಮೆ ವೈದ್ಯರು ಇದ್ದರೂ ಸಹ ರೋಗಿಗಳನ್ನು ಪರಿಶೀಲನೆ ಮಾಡದೇ ಕೇವಲ ಚೀಟಿ ಬರೆದು ಜಿಲ್ಲಾ ಮೆಗನ್ ಆಸ್ಪತ್ರೆಗೆ ಕಳುಹಿಸುವುದು ಸಾಮಾನ್ಯವಾಗಿದ್ದು, ಇದರಿಂದ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಲಾಗಿದೆ.



ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ವಿಶೇಷವಾಗಿ ತೊಂದರೆ ಉಂಟಾಗುತ್ತಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದ ಕಾರಣ ಬಡಜನರು ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸಾರ್ವಜನಿಕರಿಗೆ ಆರ್ಥಿಕ ಹೊರೆ ಹೆಚ್ಚಿಸುವುದರ ಜೊತೆಗೆ ಸರ್ಕಾರದ ಉದ್ದೇಶಕ್ಕೂ ವಿರುದ್ಧವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಮಂಗಳವಾರ (ಮಾರ್ಚ್ 31) ಬೆಳಿಗ್ಗೆ 11:20ರ ವೇಳೆಯಲ್ಲೂ ಮುಖ್ಯ ವೈದ್ಯಾಧಿಕಾರಿ ಗೈರುಹಾಜರಿದ್ದು, ಕೇವಲ ಸಹಾಯಕ ಸಿಬ್ಬಂದಿ ಮಾತ್ರ ಇದ್ದದ್ದು ಕಂಡುಬಂದಿದೆ ಎಂದು ತಿಳಿಸಲಾಗಿದೆ. ಇದು ಆರೋಗ್ಯ ಕೇಂದ್ರದ ಆಡಳಿತ ವೈಫಲ್ಯವನ್ನು ಸ್ಪಷ್ಟಪಡಿಸುತ್ತದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.

ಆದ್ದರಿಂದ, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ವೈದ್ಯರನ್ನು ನಿಯಮಿತವಾಗಿ ಹಾಜರಾಗುವಂತೆ ಮಾಡುವುದರ ಜೊತೆಗೆ ಹೆಚ್ಚುವರಿ ವೈದ್ಯರನ್ನು ನಿಯೋಜಿಸಿ, ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ನಿರ್ಲಕ್ಷ್ಯ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಹ ಒತ್ತಾಯಿಸಲಾಗಿದೆ.

ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಿ ಮೇಲ್ದರ್ಜೆಯ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ರಿಯಾಜ್ ಅಹಮದ್ ಎಚ್ಚರಿಸಿದ್ದಾರೆ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ