ರಸ್ತೆ ಅಪಘಾತದಲ್ಲಿ ಪತ್ರಕರ್ತ ಅನಿಲ್ ಸಾವು – ಅನಾಥರದ ಕುಟುಂಬ


ಶಿವಮೊಗ್ಗ:

ಪತ್ರಕರ್ತರ ಲೋಕವನ್ನು ಬೆಚ್ಚಿಬೀಳಿಸಿದ ದುಃಖದ ಘಟನೆ ಒಂದರಲ್ಲಿ ಬಿಟಿವಿ ಶಿವಮೊಗ್ಗ ಜಿಲ್ಲಾ ವರದಿಗಾರಾಗಿದ್ದ ಅನಿಲ್ ಕುಮಾರ್ ನಾಯ್ಕ (44) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸುದ್ದಿ ಜಗತ್ತಿನಲ್ಲಿ ಸದಾ ಚುರುಕಾಗಿ ಕಾರ್ಯನಿರ್ವಹಿಸುತ್ತಿದ್ದ ಅನಿಲ್ ಅವರ ಅಕಾಲಿಕ ನಿಧನ ಕುಟುಂಬದವರನ್ನು ಮಾತ್ರವಲ್ಲ, ಪತ್ರಿಕಾ ವಲಯವನ್ನೇ ದುಃಖ ಸಾಗರದಲ್ಲಿ ಮುಳುಗಿಸಿದೆ.

ಅನಿಲ್ ಅವರು ಪತ್ನಿ ಹಾಗೂ ಒಬ್ಬ ಗಂಡು ಮಗುವನ್ನು ಅಗಲಿದ್ದು, ಕುಟುಂಬವು ದುಃಖದಲ್ಲಿ ಮುಳುಗಿದೆ. ಮನೆಯ ಆಧಾರಸ್ತಂಭವಾಗಿದ್ದ ಅನಿಲ್ ಅವರ ಅಕಾಲಿಕ ಮರಣದಿಂದ ಪತ್ನಿ ಮತ್ತು ಮಗು ಅನಾಥರಂತಾಗಿರುವುದು ಮನಕಲುಕುವ ಸಂಗತಿ.


ಅನಿಲ್ ಅವರು ತಮ್ಮ ವೃತ್ತಿಜೀವನವನ್ನು ಟಿವಿ9ನಲ್ಲಿ ಕ್ಯಾಮೆರಾಮನ್ ಆಗಿ ಚಿಕ್ಕಮಗಳೂರಿನಲ್ಲಿ ಆರಂಭಿಸಿದ್ದರು. ನಂತರ ಬಿಟಿವಿಯಲ್ಲಿ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸಿ ಜನಸಾಮಾನ್ಯರ ಸಮಸ್ಯೆಗಳನ್ನು ಧೈರ್ಯವಾಗಿ ಹೊರತರುತ್ತಿದ್ದರು. ಪತ್ರಿಕೋದ್ಯಮದ ಮೇಲೆ ಅಪಾರ ಪ್ರೀತಿ ಹೊಂದಿದ್ದ ಅವರು ನಂತರ ತಮ್ಮದೇ ಖಾಸಗಿ ಯೂಟ್ಯೂಬ್ ಚಾನೆಲ್ ಆರಂಭಿಸಿ ಸಮಾಜಮುಖಿ ಸುದ್ದಿಗಳನ್ನು ಜನತೆಗೆ ತಲುಪಿಸುತ್ತಿದ್ದರು.

ನಿನ್ನೆ ಸಂಜೆ ತಮ್ಮ ನಿವಾಸವಾದ ಕಟ್ಟೆ ಸುಬ್ಬಣ್ಣ ಕಲ್ಯಾಣ ಮಂಟಪದ ಹತ್ತಿರದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ವಿನೋಬಾನಗರ 60 ಅಡಿ ರಸ್ತೆಯ 12ನೇ ಅಡ್ಡ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಎದುರಿನಿಂದ ಬಂದ ಬೈಕ್ ಸವಾರನ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳೀಯರ ಹೇಳಿಕೆಯಂತೆ, ಬೈಕ್ ಸವಾರನು ಒಂದು ಕೈಯಲ್ಲಿ ಮೊಬೈಲ್ ಹಿಡಿದು ವೇಗವಾಗಿ ವಾಹನ ಚಲಾಯಿಸುತ್ತಿದ್ದುದೇ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಕ್ಷಣಾರ್ಧದಲ್ಲಿ ನಡೆದ ಈ ದುರಂತದಲ್ಲಿ ಅನಿಲ್ ಅವರು ಗಂಭೀರವಾಗಿ ಗಾಯಗೊಂಡು ಪ್ರಾಣ ಕಳೆದುಕೊಂಡಿದ್ದಾರೆ.

ಸಮಾಜದ ಧ್ವನಿಯಾಗಿದ್ದ ಪತ್ರಕರ್ತನೊಬ್ಬ ಹೀಗೆ ಅಕಾಲದಲ್ಲಿ ಜೀವ ಕಳೆದುಕೊಂಡಿರುವುದು ಎಲ್ಲರನ್ನೂ ಕಳವಳಗೊಳಿಸಿದೆ. ಅನಿಲ್ ಅವರ ಸಾವು ಪತ್ರಿಕೋದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಕುಟುಂಬದ ದುಃಖದಲ್ಲಿ ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದಾರೆ.

ರಸ್ತೆ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ:

ಮೊಬೈಲ್ ಬಳಸುತ್ತಾ ವಾಹನ ಚಲಾಯಿಸುವಂತಹ ಅಜಾಗರೂಕತೆಗಳು ಜೀವಗಳನ್ನು ಕಸಿದುಕೊಳ್ಳುತ್ತಿರುವುದು ಮತ್ತೆ ಸ್ಪಷ್ಟವಾಗಿದೆ. ಅನಿಲ್ ಅವರಂತಹ ಅಮೂಲ್ಯ ಜೀವಗಳು ಕಳೆದುಕೊಳ್ಳದಂತೆ ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದು ಸಾರ್ವಜನಿಕರ ಮನವಿ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ