ಮಹಿಳೆಯರು ಸಂಘಟಿತರಾಗುವುದು ಅತ್ಯಂತ ಅವಶ್ಯ
ಶಿವಮೊಗ್ಗ: ಸಮಾಜದ ಬೆಳವಣಿಗೆಗೆ ಮಹಿಳೆಯರ ಪಾತ್ರ ದೊಡ್ಡದು. ಮಹಿಳೆಯರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು, ಆರ್ಥಿಕವಾಗಿ ಸದೃಢರಾಗಲು ಸಂಘಟಿತರಾಗುವುದು ಮುಖ್ಯ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಜಿಲ್ಲಾ ಸರ್ವೋದಯ ಮಂಡಲದಿಂದ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧನೆ ಮಾಡಿದ ಮಹಿಳೆಯರು ಮತ್ತು ಆಕಾಶವಾಣಿ ಆರ್ ಜೆ ಬಳಗದವರನ್ನು ಸನ್ಮಾನಿಸಿ ಮಾತನಾಡಿದರು.
ಹೆಣ್ಣು ಮಕ್ಕಳು ಸ್ವಾವಲಂಬಿಯಾಗಬೇಕು. ಮಹಿಳೆ ತನ್ನ ಪ್ರಯತ್ನ, ಪರಿಶ್ರಮದಿಂದ ಈಗ ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾಳೆ. ತಾನು ಪಡೆದುಕೊಂಡ ಶಿಕ್ಷಣದಿಂದ ಸ್ವತಂತ್ರವಾಗಿ ಜೀವನ ಮಾಡುವ ಶಕ್ತಿ ಹೊಂದಿದ್ದಾಳೆ. ಮಹಿಳೆಯರ ಅಭಿವೃದ್ಧಿ ಎಂದರೆ ಒಟ್ಟಾರೆ ಸಮಾಜದ ಅಭಿವೃದ್ಧಿ ಎಂದು ತಿಳಿಸಿದರು.
ಮನೋವೈದ್ಯೆ ಕೆ.ಎಸ್.ಪವಿತ್ರ ಮಾತನಾಡಿ, ಮಹಿಳೆಯು ಆರೋಗ್ಯದಿಂದ ಇದ್ದರೆ ಮನೆಗೆ ಅಡಿಪಾಯವಿದ್ದಂತೆ. ಅವರು ಆರೋಗ್ಯದಿಂದ ಇದ್ದಷ್ಟು ಮನೆ ಸಬಲವಾಗಿರುತ್ತದೆ. ಮಹಿಳೆಯ ದೃಢಸಂಕಲ್ಪವು ಯಾವುದೇ ಸವಾಲನ್ನು ಜಯಿಸಬಹುದು ಎಂದರು.
ಜಿಲ್ಲಾ ಸರ್ವೋದಯ ಮಂಡಲ ಅಧ್ಯಕ್ಷ ಆರ್.ಮನೋಹರ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ ಕೇವಲ ಅಪರಾಧವಲ್ಲ, ಅದೊಂದು ನೈತಿಕ ಕಳಂಕ ಮತ್ತು ಸಾಂವಿಧಾನಿಕ ಅವಮಾನ ಎಂದು ಹೇಳಿದರು.
ಸನ್ಮಾನಿತರಾದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎಮಿರೇಟ್ಸ್ ಪ್ರಾಧ್ಯಾಪಕಿ ಡಾ. ವಿಜಯ ದೇವಿ ಮಾತನಾಡಿ, ಮಹಿಳೆಯ ಸಬಲೀಕರಣ ಮನೆಯಿಂದಲೇ ಪ್ರಾರಂಭವಾಗಬೇಕು. ಶೈಕ್ಷಣಿಕ ಪ್ರಗತಿ ತುಂಬಾ ಮುಖ್ಯ. ಮಹಿಳೆಯರ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕು ಎಂದರು.
ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಬಸವರಾಜ ನೆಲ್ಲಿಸರ, ಆಕಾಶವಾಣಿ ಆರ್ ಜೆ ಗಣೇಶ್ ಕೆಂಚನಾಲ್, ಸನ್ಮಾನಿತ ಆಕಾಶವಾಣಿ ಆರ್ ಜೆ ಗಳಾದ ಪ್ರೇಮ ಸಾಲೆರಾ, ನಂದಿನಿ, ವಿದ್ಯಾ ಕಾರಂತ್ ಹಾಗೂ ಬಸವರಾಜ್ ಗುಬ್ಬಿ.. ಮಾನಸ ಶಿವರಾಮ್ ಕೃಷ್ಣ, ಚಂದ್ರಿಕಾ ನೇರಲಗುಂಡಿ, ಬ್ರಹ್ಮಾನಂದ ರಾನಾದೆ, ಪಂಕಜ, ಸಹನಾ ಚೇತನ್, ರಾಜು ಶಂಕರಘಟ್ಟ, ಡಾ ಮಾನಸ, ಆಕಾಶವಾಣಿ ಆರ್ ಜೆ ಬಳಗ ಇತರರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ