ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಶಿವಮೊಗ್ಗ ಮಾದಿಗ ಮಹಾಸಭಾ ಪ್ರತಿಭಟನೆ
ಶಿವಮೊಗ್ಗ: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಮಹಾಸಭಾ ಜಿಲ್ಲಾ ಸಮಿತಿ ಹಾಗೂ ಜಿಲ್ಲೆಯ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಸರ್ಕಾರ ಒಳ ಮೀಸಲಾತಿ ಜಾರಿಗೆ ತಡ ಮಾಡುತ್ತಿರುವುದನ್ನು ಖಂಡಿಸಿದ ಪ್ರತಿಭಟನಾಕಾರರು ತಕ್ಷಣ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಸಂಘಟನೆಗಳ ಮುಖಂಡರು, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೆ ತರುವುದು ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಪ್ರಮುಖ ಭರವಸೆಯಾಗಿದ್ದರೂ, ಇನ್ನೂ ಸ್ಪಷ್ಟ ನಿರ್ಧಾರ ಕೈಗೊಳ್ಳದೇ ಕಾಲಹರಣ ಮಾಡುತ್ತಿರುವುದು ಅಸಮಾಧಾನಕಾರಿ ಎಂದು ಆರೋಪಿಸಿದರು.
ಮಾದಿಗ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ತಲತಲಾಂತರಗಳಿಂದ ಅನ್ಯಾಯ ಅನುಭವಿಸುತ್ತಿದ್ದು, ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡಬೇಕು ಎಂಬ ಬೇಡಿಕೆಯನ್ನು ಕಳೆದ 35 ವರ್ಷಗಳಿಂದ ಹೋರಾಟದ ಮೂಲಕ ಮುಂದಿಟ್ಟುಕೊಂಡು ಬಂದಿದೆ ಎಂದು ಹೇಳಿದರು. ಈ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಕೂಡ ಮಾನ್ಯತೆ ನೀಡಿದ್ದು, 2024ರ ಆಗಸ್ಟ್ 1ರಂದು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ಐತಿಹಾಸಿಕ ತೀರ್ಪು ನೀಡಿದೆ ಎಂದು ಅವರು ತಿಳಿಸಿದರು.
ಆದರೂ ತೀರ್ಪು ಬಂದ ಬಳಿಕವೂ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬರದೆ ಮೀನಾಮೇಷ ಎಣಿಸುತ್ತಿರುವುದು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿರುವ ಸಮುದಾಯಗಳಿಗೆ ನಿರಾಶೆ ಉಂಟು ಮಾಡಿದೆ ಎಂದು ಮುಖಂಡರು ಹೇಳಿದರು.
ಜಸ್ಟೀಸ್ ನಾಗಮೋಹನ್ ದಾಸ್ ವರದಿಯಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಸ್ಪಷ್ಟ ಶಿಫಾರಸುಗಳಿವೆ. ಶೇ.17 ಮೀಸಲಾತಿ ಸಂಬಂಧಿಸಿದ ತೀರ್ಮಾನಕ್ಕೆ ಹೈಕೋರ್ಟ್ ತಡೆಯಾಜ್ಞೆ ಇದ್ದರೂ, ಈಗಿರುವ ಶೇ.15 ಮೀಸಲಾತಿಯಲ್ಲಿಯೇ ಒಳ ಮೀಸಲಾತಿ ಜಾರಿಗೆ ಯಾವುದೇ ಕಾನೂನು ಅಡ್ಡಿಯಿಲ್ಲ ಎಂದು ರಾಜ್ಯದ ಅಡ್ವಕೇಟ್ ಜನರಲ್ ಸ್ಪಷ್ಟಪಡಿಸಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಈ ಪರಿಸ್ಥಿತಿಯಲ್ಲಿ ಸರ್ಕಾರ ಸುಮಾರು 56,342 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಮುಂದಾಗಿರುವುದು ಪರಿಶಿಷ್ಟ ಜಾತಿಗಳಲ್ಲಿನ ಅಸ್ಪೃಶ್ಯ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದು ಅವರು ಆರೋಪಿಸಿದರು. ಒಳ ಮೀಸಲಾತಿಯಿಲ್ಲದೆ ಮೀಸಲಾತಿ ನೀಡುವುದು ಘೋರ ಸಾಮಾಜಿಕ ಅನ್ಯಾಯವಾಗುತ್ತದೆ ಎಂದು ಹೇಳಿದರು.
ಮಾರ್ಚ್ 27ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಯಾವುದೇ ಹೊಸ ಸಮಿತಿ ರಚಿಸುವ ಅಗತ್ಯವಿಲ್ಲ, ಜಸ್ಟೀಸ್ ನಾಗಮೋಹನ್ ದಾಸ್ ವರದಿಯಲ್ಲೇ ಎಲ್ಲಾ ವಿವರಗಳಿವೆ ಎಂದು ಮುಖಂಡರು ಒತ್ತಾಯಿಸಿದರು.
ಇಲ್ಲದಿದ್ದರೆ ಮಾದಿಗ ಮಹಾಸಭಾ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆ ವೇಳೆ ಕೆಲ ಹೋರಾಟಗಾರರು ಜಿಲ್ಲಾಧಿಕಾರಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದರೂ ನಂತರ ಶಾಂತಗೊಂಡಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಹೆಚ್. ಶಿವಾಜಿ, ಜಿಲ್ಲಾ ಉಪಾಧ್ಯಕ್ಷ ರಮೇಶ್ ಇ., ಪ್ರಕಾರ್ಯದರ್ಶಿ ತೇಜಸ್ ಆರ್., ಖಜಾಂಚಿ ಎಂ. ಶಿವಲಿಂಗಪ್ಪ, ಜಿಲ್ಲಾ ಮುಖಂಡ ತಿಮ್ಲಾಪುರ ಲೋಕೇಶಪ್ಪ, ಮಾಜಿ ನಗರಸಭಾ ಸದಸ್ಯ ಆರ್. ಶಿವಣ್ಣ, ಡಿಎಸ್ ಸಂಚಾಲಕ ಚಿನ್ನಯ್ಯ, ಮಂಜುನಾಥ ಎಸ್., ಸೂಲಯ್ಯ, ಅಣ್ಣಪ್ಪ ಪಿ., ಟಿ.ಹೆಚ್. ಹಾಲೇಶಪ್ಪ, ಅಣ್ಣಪ್ಪ ಎ.ಕೆ., ಹೆಚ್.ಎನ್. ಪ್ರಭು, ಮಂಜಪ್ಪ ಬೀರನಕೆರೆ, ನಗರಾಧ್ಯಕ್ಷ ಅಣ್ಣಪ್ಪ ಕೆ., ಶಿಕಾರಿಪುರ ಅಧ್ಯಕ್ಷ ಮುಗಳಗೆರೆ ಬಸವರಾಜ್, ಗ್ರಾಮಾಂತರ ಅಧ್ಯಕ್ಷರು ನೀಲಪ್ಪ, ರಘು, ತೀರ್ಥಹಳ್ಳಿ ತಾಲೂಕು ಅಧ್ಯಕ್ಷ ನಾಗರಾಜ್, ಭದ್ರಾವತಿ ತಾಲೂಕು ಅಧ್ಯಕ್ಷ ಮೈಲಾರಪ್ಪ, ಸೊರಬ ತಾಲೂಕು ಅಧ್ಯಕ್ಷ ಗಿಡ್ಡಪ್ಪ, ಯುವ ಘಟಕ ಜಿಲ್ಲಾಧ್ಯಕ್ಷ ನಿಖಿಲ್ ಮೂರ್ತಿ ಹಾಗೂ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಕೆಂಪಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.





ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ