ಪ್ಲಾಸ್ಟಿಕ್ ಬಳಕೆಯು ಆರೋಗ್ಯಕ್ಕೆ ಹಾನಿಕರ
ಶಿವಮೊಗ್ಗ: ಪ್ಲಾಸ್ಟಿಕ್ ಬಳಸುವುದು ಆರೋಗ್ಯಕ್ಕೆ ಹಾನಿಕರ. 2022ರಲ್ಲಿ ಪ್ಲಾಸ್ಟಿಕ್ ಬ್ಯಾನ್ ಆಗಿದ್ದರೂ ಕೂಡ ಜನರು ಅತಿ ಹೆಚ್ಚು ಪ್ಲಾಸ್ಟಿಕ್ ಬಳಕೆಯನ್ನು ಮಾಡಿ ಕ್ಯಾನ್ಸರ್ ರೋಗ ಮತ್ತು ಇತರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಪ್ರಾಧ್ಯಾಪಕ ಡಾ. ಪರಿಸರ ನಾಗರಾಜ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಜನರು ಜಾಗೃತರಾಗಬೇಕು. ವಿದ್ಯಾವಂತರು, ಅಧಿಕಾರಿವರ್ಗ, ಉನ್ನತ ಅಧಿಕಾರಿ ವರ್ಗದವರು, ಸಂಘ ಸಂಸ್ಥೆಗಳು ಎಲ್ಲ ಒಗ್ಗಟ್ಟಾಗಿ ಹೆಚ್ಚು ಅರಿವಿನ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಪ್ಲಾಸ್ಟಿಕ್ ನಿಂದ ಆಗುವ ಅನಾಹುತಗಳನ್ನು ತಪ್ಪಿಸುವುದಕ್ಕೆ ಸಾಕ್ಷ್ಯಚಿತ್ರಗಳ ಮುಖಾಂತರ ತಿಳಿಸಬೇಕು ಎಂದು ತಿಳಿಸಿದರು.
ಜನರು ಪ್ಲಾಸ್ಟಿಕ್ ಬಾಟಲಿಯ ನೀರು ಬಳಸುವುದನ್ನು ಕಡಿಮೆ ಮಾಡಬೇಕು ಮತ್ತು ಪೇಪರ್ ಲೋಟದಲ್ಲಿ ಬಿಸಿಯಾಗಿರುವ ಯಾವುದೇ ದ್ರವ್ಯಗಳನ್ನ ಸ್ವೀಕರಿಸಬಾರದು. ಜನಗಳು ಕುಡಿಯುವ ನೀರಿನ ಬಗ್ಗೆ ತುಂಬಾ ಗಮನ ಹರಿಸಬೇಕಾಗಿದೆ. ಇವತ್ತಿನ ವಾತಾವರಣದಲ್ಲಿ ಕಲುಷಿತ ನೀರು ಹೆಚ್ಚಾಗಿರುವುದರಿಂದ ಹಾಗೂ ವಾತಾವರಣದ ವೈಪರಿತ್ಯದಿಂದ ಶುದ್ಧವಾದ ನೀರನ್ನು ಕುಡಿಯುವುದು ಕಷ್ಟವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಶುದ್ಧವಾದ ನೀರು ಕುಡಿದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾ ಗಮನಹರಿಸಬೇಕು ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ಹೆಚ್ಚು ಮಾಡಿರುವುದರಿಂದ ಆರೋಗ್ಯದತ್ತ ಗಮನಹರಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ನಮ್ಮಂತಹ ಸಂಘ ಸಂಸ್ಥೆಗಳು ಹೆಚ್ಚು ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಸ್ವಚ್ಛತೆಯನ್ನ ಜನಗಳು ತಮ್ಮ ಮನೆಯಿಂದಲೇ ಪ್ರಾರಂಭ ಮಾಡುವುದರ ಜೊತೆಗೆ ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಧನಂಜಯ್ ರಾಂಪುರ ಮಾತನಾಡಿ, ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಿಸಬೇಕು. ರೋಟರಿ ಎಲ್ಲಾ ಸದಸ್ಯರು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹೆಚ್ಚು ಹೆಚ್ಚು ಕೈಗೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಶ್ರೀಕಾಂತ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಆದಿಮೂರ್ತಿ, ಕೇಶವಪ್ಪ, ಪರಮೇಶ್ವರಿ, ಕೃಷ್ಣಮೂರ್ತಿ, ಗಣೇಶ್, ಶ್ರೀನಿವಾಸ್ ಗೌಡ, ಪ್ರೊಫೆಸರ್ ಗಂಗಪ್ಪ, ಬಿಂದು ವಿಜಯಕುಮಾರ್ ಇತರರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ