ಶಿಕ್ಷಕರಿಗೆ ಶ್ವಾನ ಕಾಯುವ ಕಾಯಕ! — ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ
ಶಿವಮೊಗ್ಗ, ಮಾರ್ಚ್ 11: ರಾಜ್ಯ ಸರ್ಕಾರ ಬೀದಿ ನಾಯಿಗಳ ನಿಯಂತ್ರಣ ಕಾರ್ಯಕ್ಕೆ ಶಾಲಾ ಶಿಕ್ಷಕರನ್ನೇ ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡುವ ನಿರ್ಧಾರ ತೆಗೆದುಕೊಂಡಿರುವುದು ಹಾಸ್ಯಾಸ್ಪದ ಹಾಗೂ ವಿಷಾದನೀಯವಾಗಿದೆ ಎಂದು ಶಿವಮೊಗ್ಗದ ಮಾಜಿ ಕಾರ್ಪೊರೇಟರ್ ಐಡಿಯಲ್ ಗೋಪಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೇ ಶಿಕ್ಷಕರು ಹಲವು ಅನ್ಯ ಇಲಾಖೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಜನಗಣತಿ, ಜಾತಿ ಗಣತಿ, ಮತದಾರರ ಪಟ್ಟಿ ಪರಿಷ್ಕರಣೆ, ಮಕ್ಕಳಿಗೆ ಹಾಲು–ಮೊಟ್ಟೆ ವಿತರಣೆ, ಮಧ್ಯಾಹ್ನದ ಊಟ ವ್ಯವಸ್ಥೆ, ಬಾಳೆಹಣ್ಣು ವಿತರಣೆ ಸೇರಿದಂತೆ ಅನೇಕ ಕಾರ್ಯಗಳನ್ನು ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಇದರ ನಡುವೆಯೇ ಇದೀಗ ಬೀದಿ ನಾಯಿಗಳ ನಿಯಂತ್ರಣ ಕಾರ್ಯಕ್ಕೂ ಶಿಕ್ಷಕರನ್ನೇ ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡುವಂತೆ ಸೂಚಿಸಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
“ಮಕ್ಕಳಿಗೆ ಪಾಠ ಮಾಡುವ ಪವಿತ್ರ ಕೆಲಸವನ್ನು ಬಿಟ್ಟು ಶಿಕ್ಷಕರು ಬೀದಿ ನಾಯಿಗಳನ್ನು ಕಾಯುವ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು,” ಎಂದು ಮಾಜಿ ಕಾರ್ಪೊರೇಟರ್ ಐಡಿಯಲ್ ಗೋಪಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಶಿಕ್ಷಕರ ಕೊರತೆ ಇದ್ದು, ಇಂತಹ ಅನ್ಯ ಇಲಾಖೆಯ ಕೆಲಸಗಳನ್ನು ನಿರ್ವಹಿಸುತ್ತಾ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ಕಷ್ಟಕರವಾಗಿದೆ. ಇದೇ ಕಾರಣದಿಂದ ಸರ್ಕಾರಿ ಶಾಲೆಗಳಲ್ಲಿ ನಿರೀಕ್ಷಿತ ಮಟ್ಟದ ಫಲಿತಾಂಶಗಳು ಬರುತ್ತಿಲ್ಲ ಎಂಬುದು ಸಹ ಗಮನಿಸಬೇಕಾದ ವಿಷಯ ಎಂದು ಅವರು ಹೇಳಿದ್ದಾರೆ.
ಹೀಗಾಗಿ ಸರ್ಕಾರ ಶಿಕ್ಷಕರಿಗೆ ಅನ್ಯ ಇಲಾಖೆಯ ಕೆಲಸಗಳನ್ನು ನೀಡುವುದನ್ನು ತಡೆಯಬೇಕು ಹಾಗೂ ಶಿಕ್ಷಕರನ್ನು ಶಾಲಾ ಶಿಕ್ಷಕರಾಗಿಯೇ ಉಳಿಸಿ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಕಾರ್ಪೊರೇಟರ್ ಐಡಿಯಲ್ ಗೋಪಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ