ಸಿಡಿಪಿ ಯೋಜನೆಗೆ ಕುರಿತು ಸರ್ಕಾರಿ ಆದೇಶ ಜಾರಿ ಪತ್ರಕರ್ತ ಎಸ್. ಎಲ್. ನಿಖಿಲ್ ಮನವಿಗೆ ಸರ್ಕಾರದ ಸ್ಪಂದನೆ
ಶಿವಮೊಗ್ಗ: ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ) ಅಡಿಯಲ್ಲಿ ಭೂಮಿಯ ಉಪಯೋಗಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ಆಡಳಿತಾತ್ಮಕ ಗೊಂದಲವನ್ನು ನಿವಾರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹಾಗೂ ಸ್ಪಷ್ಟ ಸರ್ಕಾರಿ ಆದೇಶವನ್ನು ಜಾರಿಗೊಳಿಸಿದೆ. ಈ ಕ್ರಮವು ಪತ್ರಕರ್ತ ಎಸ್. ಎಲ್. ನಿಖಿಲ್ ಅವರು ಸಾರ್ವಜನಿಕ ಹಿತಾಸಕ್ತಿಯನ್ನು ಮನಗಂಡು ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಜಾರಿಯಾಗಿದೆ.
ದಿನಾಂಕ 12.02.2026 ರಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾನ್ಯ ಕಂದಾಯ ಸಚಿವರಾದ ಸನ್ಮಾನ್ಯ ಶ್ರೀ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ಜಿಲ್ಲಾ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯ ನಂತರ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತ ಎಸ್. ಎಲ್. ನಿಖಿಲ್ ಅವರು, ಸಿಡಿಪಿ ಯೋಜನೆ ಪ್ರಕಾರ ಭೂಮಿಯನ್ನು ಉಪಯೋಗಿಸಲು ಭೂ ಪರಿವರ್ತನೆ ಅಗತ್ಯವಿಲ್ಲ ಎಂದು ಮಾನ್ಯ ಸಚಿವರು ವಿಧಾನಸಭೆಯಲ್ಲಿ ನೀಡಿದ್ದ ಸ್ಪಷ್ಟ ಹೇಳಿಕೆಯಿದ್ದರೂ, ಈ ಕುರಿತು ಸರ್ಕಾರದಿಂದ ಅಧಿಕೃತ ಹಾಗೂ ಸ್ಪಷ್ಟ ಆದೇಶ ಹೊರಬರದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಅಧಿಕಾರಿಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ ಎಂದು ಸಚಿವರ ಗಮನಕ್ಕೆ ತಂದರು.
ಇದರ ಪರಿಣಾಮವಾಗಿ ಅನೇಕ ಕಡತಗಳು ನಿರ್ಧಾರಕ್ಕಾಗಿ ಉಳಿದುಕೊಂಡಿದ್ದು, ಸಾರ್ವಜನಿಕರಿಗೆ ಅನಾವಶ್ಯಕ ವಿಳಂಬ ಮತ್ತು ಆಡಳಿತಾತ್ಮಕ ತೊಂದರೆ ಉಂಟಾಗುತ್ತಿದೆ ಎಂಬುದನ್ನು ಅವರು ವಿವರಿಸಿದರು. ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಆಡಳಿತಾತ್ಮಕ ಸ್ಪಷ್ಟತೆಯ ದೃಷ್ಟಿಯಿಂದ, ಈ ಕುರಿತು ಅನುಸರಿಸಬೇಕಾದ ಕ್ರಮಗಳನ್ನು ಸ್ಪಷ್ಟವಾಗಿ ನಿರ್ದಿಷ್ಟಗೊಳಿಸುವ ಸಮಗ್ರ ಸರ್ಕಾರಿ ಆದೇಶವನ್ನು ತಕ್ಷಣ ಜಾರಿಗೊಳಿಸುವಂತೆ ಅವರು ಮನವಿ ಮಾಡಿದರು. ಈ ಸಂಬಂಧ ಲಿಖಿತ ರೂಪದಲ್ಲಿಯೂ ಅಧಿಕೃತ ಮನವಿ ಪತ್ರವನ್ನು ಮಾನ್ಯ ಸಚಿವರಿಗೆ ಸಲ್ಲಿಸಲಾಯಿತು.
ಮನವಿಗೆ ಸ್ಪಂದಿಸಿದ ಮಾನ್ಯ ಸಚಿವರು ವಿಷಯದ ಗಂಭೀರತೆಯನ್ನು ಪರಿಗಣಿಸಿ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡುವುದಾಗಿ ಭರವಸೆ ನೀಡಿದರು. ಸಚಿವರ ನಿರ್ದೇಶನದ ಅನ್ವಯ, ಸಂಬಂಧಿತ ಇಲಾಖೆಗಳು ತ್ವರಿತ ಕ್ರಮ ಕೈಗೊಂಡು, ದಿನಾಂಕ 18.02.2026 ರಂದು ನಗರಾಭಿವೃದ್ಧಿ ಇಲಾಖೆಯು ಸಿಡಿಪಿ ಯೋಜನೆ ಅಡಿಯಲ್ಲಿ ಭೂಮಿಯ ಉಪಯೋಗಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಮತ್ತು ಸಮಗ್ರ ಸರ್ಕಾರಿ ಆದೇಶವನ್ನು ಅಧಿಕೃತವಾಗಿ ಜಾರಿಗೊಳಿಸಿದೆ.
ಈ ಮಹತ್ವದ ಆದೇಶದಿಂದ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಬೀಳಲಿದ್ದು, ಬಾಕಿ ಉಳಿದಿರುವ ಕಡತಗಳ ಶೀಘ್ರ ವಿಲೇವಾರಿ ಸಾಧ್ಯವಾಗಲಿದೆ. ಜೊತೆಗೆ ಸಾರ್ವಜನಿಕರಿಗೆ ಆಗುತ್ತಿದ್ದ ಅನಾವಶ್ಯಕ ತೊಂದರೆ ನಿವಾರಣೆಯಾಗುವುದರೊಂದಿಗೆ ಆಡಳಿತದಲ್ಲಿ ಪಾರದರ್ಶಕತೆ ನಿರೀಕ್ಷಿಸಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ