ಶಿವಮೊಗ್ಗದಲ್ಲಿ ಶ್ರೀ ಮಾರಿಕಾಂಬ ದೇವಿ ದ್ವೈವಾರ್ಷಿಕ ಜಾತ್ರೆ ಸಂಭ್ರಮಕ್ಕೆ ಸಿದ್ಧತೆ

 


ಫೆ.24ರಿಂದ ಪೂಜಾ ವಿಧಾನಗಳು ಆರಂಭ – ಫೆ.28ಕ್ಕೆ ಮಹಾ ಜಾತ್ರೆ ಉದ್ಘಾಟನೆ

ಮಲೆನಾಡಿನ ದ್ವಾರವೆಂದು ಪ್ರಸಿದ್ಧವಾದ ಶಿವಮೊಗ್ಗ ನಗರದಲ್ಲಿ ಇತಿಹಾಸ ಪ್ರಸಿದ್ಧ ಕೋಟಿ ಶ್ರೀ ಮಾರಿಕಾಂಬ ದೇವಿ ದ್ವೈವಾರ್ಷಿಕ ಜಾತ್ರೆ ಭಕ್ತಿಭಾವ ಮತ್ತು ಸಂಪ್ರದಾಯಗಳೊಂದಿಗೆ ನಡೆಯಲು ಸಜ್ಜಾಗಿದೆ. ತುಂಗಾ ನದಿ ತಟದಲ್ಲಿರುವ ಕೆಳದಿ ಉರಸಾರ ಕೋಟೆ, ಅರಮನೆ, ಶ್ರೀ ಭೀಮೇಶ್ವರ, ಸೀತಾರಾಮಾಂಜನೇಯ ದೇವಾಲಯಗಳೊಂದಿಗೆ ಆದಿಶಕ್ತಿ ಶ್ರೀ ಮಾರಿಕಾಂಬ ದೇವಿಯ ಗದ್ದುಗೆ ನಗರಕ್ಕೆ ಅಪೂರ್ವ ಆಧ್ಯಾತ್ಮಿಕ ಗೌರವ ತಂದುಕೊಟ್ಟಿದೆ.


ಕೆಳದಿ ಶಿವಪ್ಪನಾಯಕ ರಾಜರ ಕಾಲದಿಂದಲೂ ಪ್ರಸಿದ್ಧವಾಗಿರುವ ಈ ದೇವಾಲಯವನ್ನು ಭಕ್ತರು ಹಿಂದಿನ ದಿನಗಳಲ್ಲಿ ಬಯಲು ಮಾರಿ, ಬಿಸಿಲು ಮಾರಿ, ಕೆಂಚ ಮಾರಿ ಎಂಬ ಹೆಸರಿನಿಂದ ಪೂಜಿಸುತ್ತಿದ್ದರು. ಶತಮಾನಗಳಿಂದ ಪಟ್ಟಣದ ಹಿರಿಯರು ಹಾಗೂ ಭಕ್ತರ ಏಕತೆಯಿಂದ ಜಾತ್ರೆ ನಿರಂತರವಾಗಿ ನಡೆಯುತ್ತಿದ್ದು, ರಾಜ್ಯಮಟ್ಟದಲ್ಲಿ ವಿಶಿಷ್ಟ ಐತಿಹಾಸಿಕ ಖ್ಯಾತಿ ಗಳಿಸಿದೆ. ಜಾತ್ರೆಯ ಯಶಸ್ವಿ ನಿರ್ವಹಣೆಗೆ ಆರು ಬಾಬುದಾರರು, ವಿವಿಧ ಸಮುದಾಯಗಳ ಪ್ರತಿನಿಧಿಗಳು ಹಾಗೂ ಉಪಸಮಿತಿಗಳು ಕೈಜೋಡಿಸಿದ್ದು, ಯಾವುದೇ ಭೇದಭಾವವಿಲ್ಲದೆ ಎಲ್ಲರ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ಫೆಬ್ರವರಿ 24 (ಮಂಗಳವಾರ) ಬೆಳಿಗ್ಗೆ 5 ಗಂಟೆಗೆ ಬಿ.ಬಿ. ರಸ್ತೆಯ ಬ್ರಾಹ್ಮಣ ಸಮಾಜದ ಕುಟುಂಬಗಳನ್ನು ಮಂಗಳ ವಾದ್ಯಗಳೊಂದಿಗೆ ಆಹ್ವಾನಿಸಿ ಪೂಜಾ ವಿಧಾನಗಳಿಗೆ ಚಾಲನೆ ದೊರೆಯಲಿದೆ. ಗಾಂಧಿ ಬಜಾರ್‌ನಲ್ಲಿರುವ ದೇವಿಯ ಗೃಹದಲ್ಲಿ ಉಡಿ ಮತ್ತು ಬಸ್ಸಿಂಗ ಪೂಜೆ ನೆರವೇರಿಸಲಾಗುತ್ತದೆ. ವಿಶ್ವಕರ್ಮ ಸಮಾಜವು ವಿಸರ್ಜನಾ ಮೂರ್ತಿಗೆ ಮಂಗಳ ದ್ರವ್ಯ ಅರ್ಪಿಸಿ ಸಾರ್ವಜನಿಕ ಪೂಜೆಯನ್ನು ಆರಂಭಿಸಲಿದೆ. ದಿನಪೂರ್ತಿ ಲಕ್ಷಾಂತರ ಭಕ್ತರು ಉಡಿ ಅರ್ಪಿಸಿ ಪೂಜೆ ಸಲ್ಲಿಸಲಿದ್ದಾರೆ. ರಾತ್ರಿ ವೇಳೆಗೆ ಉಪ್ಪಾರ ಸಮಾಜವು ದೇವಿಯನ್ನು ರಥದಲ್ಲಿ ಕುಳ್ಳಿರಿಸಿ ಗದ್ದುಗೆಗೆ ಮೆರವಣಿಗೆಯಲ್ಲಿ ಕರೆತರುತ್ತದೆ. ಇದೇ ವೇಳೆ ಗಂಗಾಪರಮೇಶ್ವರಿ ದೇವಾಲಯದ ಗಂಗಾಭಕ್ತರಿಂದ ಗಂಗಾಪೂಜೆ ನಡೆಯಲಿದೆ.

ಫೆಬ್ರವರಿ 25 (ಬುಧವಾರ) ಬೆಳಿಗ್ಗೆ 4 ಗಂಟೆಗೆ ವಿದ್ಯಾನಗರದ ಕಾರ್ಲಟ್ಟಿ ಹರಿಜನ ಸಮಾಜದವರು ಪ್ರಾರ್ಥನೆ ಸಲ್ಲಿಸಿದ ಬಳಿಕ ಅಮ್ಮನನ್ನು ಗದ್ದುಗೆಗೆ ಆಸೀನಗೊಳಿಸಲಾಗುತ್ತದೆ. ನಂತರ ಕುರುಬ ಸಮಾಜದ ಚೌಡಿಕೆ ಕುಟುಂಬದಿಂದ ಪೂಜೆ ನಡೆಯಲಿದೆ. ನಾಲ್ಕು ದಿನಗಳ ಕಾಲ ಗದ್ದುಗೆ ಪೂಜೆಗಳು ಕ್ರಮವಾಗಿ ನಡೆಯಲಿದ್ದು, ವಾಲ್ಮೀಕಿ ಸಮಾಜ, ಇತರೆ ಸಮುದಾಯಗಳು ಹಾಗೂ ಮಡಿವಾಳ ಸಮಾಜವು ನಿಗದಿತ ಸಮಯದಲ್ಲಿ ಪೂಜಾ ಸೇವೆ ಸಲ್ಲಿಸಲಿದ್ದಾರೆ.

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಮಹಾ ಜಾತ್ರೆಯ ಉದ್ಘಾಟನೆ ಫೆಬ್ರವರಿ 28 (ಶನಿವಾರ) ಸಂಜೆ 7 ಗಂಟೆಗೆ ಭವ್ಯ ಶ್ರೀ ಮಾರಿಕಾಂಬಯ್ಯ ಉತ್ಸವದೊಂದಿಗೆ ನಡೆಯಲಿದೆ. ಜಾನಪದ ಕಲಾ ತಂಡಗಳೊಂದಿಗೆ ಲಕ್ಷಾಂತರ ಭಕ್ತರು ಅಮ್ಮನನ್ನು ಅರಣ್ಯ ಪ್ರವೇಶಕ್ಕೆ ಕಳುಹಿಸಲಿದ್ದು, ಸಂಪ್ರದಾಯದಂತೆ ಮಡಿವಾಳ ಸಮಾಜವು ಮಧ್ಯರಾತ್ರಿ ಅರಣ್ಯಕ್ಕೆ ಕರೆದುಕೊಂಡು ಹೋಗಿ ವಿಧಿವಿಧಾನಗಳ ಪೂಜೆ ನೆರವೇರಿಸಿ ಮರಳಿಸಲಿದೆ.

ಇದಲ್ಲದೆ, ಯುವ ಕುಸ್ತಿಪಟುಗಳನ್ನು ಉತ್ತೇಜಿಸುವ ಉದ್ದೇಶದಿಂದ ಮಾರ್ಚ್ 6ರಿಂದ 8ರವರೆಗೆ ನಗರದಲ್ಲಿರುವ ನೆಹರು ಕ್ರೀಡಾಂಗಣದಲ್ಲಿ ರಾಜ್ಯ ಹಾಗೂ ಅಂತರ್‌ರಾಜ್ಯ ಮಟ್ಟದ ಕುಸ್ತಿಪಟುಗಳ ಭಾಗವಹಿಸುವಿಕೆಯಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ.

ಸಮಿತಿಯು ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಮಾರಿಕಾಂಬ ದೇವಿಯ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದೆ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ