ಐ ಟಿ ಬಿಯಾಂಡ್ ಬೆಂಗಳೂರು ಕಾರ್ಯಕ್ರಮ ಫೆ.28ಕ್ಕೆ
ಶಿವಮೊಗ್ಗ: ನಗರದ ಜೆ ಎನ್ ಎನ್ ಸಿ ಇ ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಫೆಬ್ರವರಿ 28ರಂದು ಶನಿವಾರ ಬೆಂಗಳೂರಿನಾಚೆ ಮಾಹಿತಿ ತಂತ್ರಜ್ಞಾನ ( IT BEYOND BENGALURU ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ (ಎಫ್ ಕೆ ಸಿ ಸಿ ಐ ) ಬೆಂಗಳೂರು ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ ) ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಾಹಿತಿ ತಂತ್ರಜ್ಞಾನ ಕಾರ್ಯಕ್ರಮವನ್ನು ಫೆಬ್ರವರಿ 28ರಂದು ಬೆಳಗ್ಗೆ 10.30ಕ್ಕೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಅಧ್ಯಕ್ಷತೆ ವಹಿಸುವರು.
ಎಫ್ ಕೆ ಸಿ ಸಿ ಐ ಅಧ್ಯಕ್ಷೆ ಉಮಾ ರೆಡ್ಡಿ, ಉಪಾಧ್ಯಕ್ಷ ಸಾಯಿ ರಾಮ್ ಪ್ರಸಾದ್, ಮಾಹಿತಿ ತಂತ್ರಜ್ಞಾನದ ಚೇರ್ಮನ್ ಎಚ್.ಎ.ಕಿರಣ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ ) ಉಪಾಧ್ಯಕ್ಷ ಚೇತನ್ ದೀಕ್ಷಿತ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಫೆ.28ರ ಮಧ್ಯಾಹ್ನ 2 ರಿಂದ 4.30ರವರಿಗೆ ಮಂಥನ್ 2026, ನವೋದಯ ಕೃತಕ ಬುದ್ಧಿಮತ್ತೆ ಕುರಿತು ಉಪನ್ಯಾಸ, ಚರ್ಚೆ ಮತ್ತು ಪ್ರಶ್ನೋತ್ತರದ ಕಾರ್ಯಕ್ರಮ ನಡೆಯಲಿದೆ. ಪ್ರಧಾನ ಭಾಷಣಕಾರರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಲಿದೆ.
"ಬೆಂಗಳೂರಿನಾಚೆಗೆ" ಕಾರ್ಯಕ್ರಮವು ಶಿವಮೊಗ್ಗ ನಗರಗಳನ್ನು ಸ್ವಾವಲಂಬಿ ಕೇಂದ್ರಗಳನ್ನಾಗಿ ಮಾಡುವುದು, ಬೆಂಗಳೂರಿನ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಮತ್ತು ವೃತ್ತಿಪರರಿಗೆ ಸ್ಥಳೀಯ ಅವಕಾಶಗಳನ್ನು ಒದಗಿಸುವುದು ಪ್ರಮುಖ ಗುರಿಯಾಗಿದೆ. ನಾವೀನ್ಯತೆ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಗಮನಹರಿಸಿದೆ.
ಶಿವಮೊಗ್ಗದಲ್ಲಿರುವ ಐಟಿ / ಐಟಿಇಎಸ್, ಬಿಸಿನೆಸ್ ಪ್ರೊಸೆಸಿಂಗ್ ಔಟ್ ಸೋರ್ಸಿಂಗ್ (ಬಿಪಿಒ), ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಮ್ಯಾನುಫ್ಯಾಕ್ಚರಿಂಗ್ (ಇಎಸ್ಡಿಎಂ) ಜೈವಿಕ ತಂತ್ರಜ್ಞಾನ ವಲಯ ಮತ್ತು ಟೆಲಿಕಾಂ ವಲಯದ ಕೈಗಾರಿಕೆಗಳಲ್ಲಿ ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಶಿವಮೊಗ್ಗದಲ್ಲಿ ಲಭ್ಯವಿರುವ ಪ್ರತಿಭೆ ಮತ್ತು ಕೌಶಲ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮತ್ತು ಪ್ರವೇಶಿಸಲು ನೋಡುತ್ತಿದೆ.
'ಬೆಂಗಳೂರಿನಾಚೆʼ ನಗರಗಳು ಶಿಕ್ಷಣ ಮತ್ತು ಮೂಲಸೌಕರ್ಯಕ್ಕೆ ಒತ್ತು ನೀಡುವ ಮೂಲಕ ಹೆಚ್ಚಿನ ಹೂಡಿಕೆ ಅವಕಾಶಗಳು ಮತ್ತು ಉದ್ಯೋಗಾವಕಾಶವನ್ನು ನಿರೀಕ್ಷಿಸುತ್ತಿವೆ. ಕೈಗಾರಿಕಾ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಮೂಲಕ ಬೆಳವಣಿಗೆಗೆ ಅನುಕೂಲವಾಗುವ ವಿತರಣಾ ಐಟಿ/ಐಟಿಇಎಸ್ ಮಾದರಿಯನ್ನು ಸಕ್ರಿಯಗೊಳಿಸುವತ್ತ ಗುರಿಯನ್ನು ಹೊಂದಿದೆ.
ಶಿವಮೊಗ್ಗ ನಗರ ಉತ್ತಮ ಹೂಡಿಕೆ ಅವಕಾಶಗಳ ನಿರೀಕ್ಷೆಯಲ್ಲಿವೆ. ಬೆಂಗಳೂರಿನಾಚೆ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಯನ್ನು ಉತ್ತೇಜಿಸಲು ಶಿವಮೊಗ್ಗವನ್ನು ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಹಲವು ಅವಕಾಶಗಳಿದೆ. ಶಿವಮೊಗ್ಗದಂತಹ ನಗರಗಳನ್ನು ಮಾಹಿತಿ ತಂತ್ರಜ್ಞಾನದ ವಾಣಿಜ್ಯ ಕೇಂದ್ರಗಳಾಗಿ ಪರಿವರ್ತಿಸುವುದು, ಬೆಂಗಳೂರಿನ ಮೇಲಿನ ಹೊರೆ ಕಡಿಮೆ ಮಾಡುವುದು ಮಾಹಿತಿ ತಂತ್ರಜ್ಞಾನ ಮತ್ತು ನಾವೀನ್ಯತೆ ಸಂಬಂಧಿತ ಚಟುವಟಿಕೆಯನ್ನು ಶಿವಮೊಗ್ಗ ನಗರಕ್ಕೆ ಸ್ಥಳಾಂತರಿಸುವಂತೆ ಸರ್ಕಾರದ ಗಮನ ಸೆಳೆಯುವುದು ಬೆಂಗಳೂರಿನಾಚೆ ಕಾರ್ಯಕ್ರಮದ ಗುರಿಯಾಗಿದೆ.
ಶಿವಮೊಗ್ಗ ನಗರ ಇಂಜಿನಿಯರಿಂಗ್ ಕಾಲೇಜುಗಳು, ಎಂಬಿಎ ಕಾಲೇಜುಗಳನ್ನು ಹೊಂದಿದ್ದು, ಮುಂಬರುವ ಕೈಗಾರಿಕೆಗಳಿಗೆ ನುರಿತ ಕಾರ್ಯಪಡೆಯನ್ನು ಖಚಿತಪಡಿಸುತ್ತದೆ. ಶಿವಮೊಗ್ಗ ನಗರದಲ್ಲಿ ಮಾಹಿತಿ ತಂತ್ರಜ್ಞಾನ ಪ್ರತಿಭಾವಂತರ ಸಂಖ್ಯೆ ಸಾಕಷ್ಟಿದೆ. ಬೌದ್ಧಿಕ ಬಂಡವಾಳ, ಅಭಿವೃದ್ಧಿ ಹೊಂದುತ್ತಿರುವ ಐಟಿ ಪರಿಸರ ವ್ಯವಸ್ಥೆ, ಐಟಿ ಎಸ್ಇಝಡ್ ಮತ್ತು ಟೆಕ್ ಪಾರ್ಕ್, ಇಂಜಿನಿಯರಿಂಗ್ ತಂತ್ರಜ್ಞಾನ ಕಾಲೇಜುಗಳು, ಇನ್ಕ್ಯುಬೇಟರ್ ಗಳು, ಐಟಿ, ಸ್ಟಾರ್ಟ್ ಅಪ್ ಗಳನ್ನು ಹೊಂದಿರುವ ನಗರ. ಮಲೆನಾಡು ಪ್ರದೇಶ ಶಿವಮೊಗ್ಗ ಮಾಹಿತಿ ತಂತ್ರಜ್ಞಾನದ ಸಂಭಾವ್ಯ ಕೇಂದ್ರ ವಾಗಿ ಬೆಳೆಯಲು ವಿಪುಲ ಅವಕಾಶವಿದೆ. ಶಿವಮೊಗ್ಗಕ್ಕೆ ಇಂತಹ ಕಾರ್ಯಕ್ರದ ಅವಶ್ಯಕತೆಯಿದೆ.
ಜೈವಿಕ ತಂತ್ರಜ್ಞಾನ ವಲಯ, ಸಂಶೋಧನೆ ಮತ್ತು ಅಭಿವೃದ್ಧಿ ಮೂಲ ಸೌಕರ್ಯವನ್ನು ಉತ್ತೇಜಿಸಲು ಶಿವಮೊಗ್ಗದಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆ ಸಂಬಂಧಿತ ಚಟುವಟಿಕೆ ಕೇಂದ್ರಗಳನ್ನು ಸ್ಥಾಪಿಸಬೇಕು. ನವೋದ್ಯಮಗಳು ನಾವೀನ್ಯತೆಗೆ ಉತ್ತೇಜನ ನೀಡಲು ಅನುದಾನಗಳು ಮತ್ತು ಪ್ರೋತ್ಸಾಹಕಗಳ ಅವಶ್ಯಕತೆಯಿದೆ. ಬಹುರಾಷ್ಟ್ರೀಯ ಕಂಪನಿಗಳು ಶಿವಮೊಗ್ಗದಲ್ಲಿ ಹೆಚ್ಚಿನ ಮೌಲ್ಯದ ಸಂಶೋಧನೆ ಜಾಗತಿಕ ಸಾಮರ್ಥ್ಯ ಕೇಂದ್ರಗಳು ಮತ್ತು ಅಭಿವೃದ್ಧಿ, ದತ್ತಾಂಶ ವಿಶ್ಲೇಷಣೆ ಮತ್ತು ಐಟಿ ಸೇವಾ ಘಟಕಗಳನ್ನು ಸ್ಥಾಪಿಸಲು ಬೆಂಬಲಿಸಬೇಕು. ಶಿವಮೊಗ್ಗದಲ್ಲಿ ಎಲೆಕ್ಟ್ರಾನಿಕ್ ಸಿಸ್ಟಮ್ ವಿನ್ಯಾಸ, ಉತ್ಪಾದನೆ (ESDM) ಮತ್ತು ಅಗ್ರಿಟೆಕ್, ಹೆಲ್ತ್ ಟೆಕ್ ಮೇಲೆ ಕೇಂದ್ರೀಕರಿಸಿ ಮೀಸಲಾದ ತಂತ್ರಜ್ಞಾನ ಕ್ಲಸ್ಟರ್ ಗಳನ್ನು ಸ್ಥಾಪಿಸಬೇಕಿದೆ ಎಂದು ಸಂಘದ ಅಧ್ಯಕ್ಷರಾದ ಬಿ ಗೋಪಿನಾಥ್ ಹೇಳಿದರು ,ಈ ಪತ್ರಿಕಾಗೋಷ್ಟಿಯಲ್ಲಿ ಉಪಾಧ್ಯಕ್ಷರಾದ ಜಿ ವಿಜಯಕುಮಾರ್, ಕಾರ್ಯದರ್ಶಿ ಎ ಎಂ ಸುರೇಶ್, ಖಜಾಂಜಿ ಆರ್ ಮನೋಹರ್, ನಿರ್ದೇಶಕರಾದ ಎಸ್ ಎಸ್ ಉದಯ್ ಕುಮಾರ್, ಗಣೇಶ್ ಎಂ ಅಂಗಡಿ, ಕಿರಣ್ ಕುಮಾರ್ ಜಿ ವಿ, ರವಿಪ್ರಕಾಶ್ ಜನ್ನೆ ಹಾಜರಿದ್ದರು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ