ಸರ್ಕಾರಿ ಪತ್ರಿಕಾ ಭವನ ವಿಷಯದಲ್ಲಿ ಧ್ವನಿ ಸಂಘದ ಆಕ್ರೋಶ – ನ. 20ರಂದು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
ಶಿವಮೊಗ್ಗ: ಸರ್ಕಾರಿ ಪತ್ರಿಕಾ ಭವನದ ಹಕ್ಕು, ನಾಮಫಲಕ ಮತ್ತು ಆಡಳಿತ ಸಂಬಂಧಿಸಿದ ಗೊಂದಲಗಳ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ (ರಿ.), ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ನ.20ರಂದು ಬೆಳಿಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ.
ಈ ಕುರಿತು ಗುರುವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಜಿ. ನಾಗರಾಜ ಮಾತನಾಡಿ, “ಶಿವಮೊಗ್ಗದ ಆರ್.ಟಿ.ಓ. ರಸ್ತೆಯಲ್ಲಿರುವ ಪತ್ರಿಕಾ ಭವನವು ಸರ್ಕಾರದ ಅನುದಾನ ಮತ್ತು ಜನಪ್ರತಿನಿಧಿಗಳ ನೆರವಿನಿಂದ ನಿರ್ಮಿತವಾದ ಸರ್ಕಾರದ ಪತ್ರಿಕಾ ಭವನವಾಗಿದೆ. ಆದರೆ ಜಿಲ್ಲಾಡಳಿತ ‘ಸರ್ಕಾರಿ ಪತ್ರಿಕಾ ಭವನ’ ಎಂದು ನಾಮಫಲಕ ಅಳವಡಿಸಲು ಹಿಂಜರಿಯುತ್ತಿದ್ದು, ಖಾಸಗಿ ಟ್ರಸ್ಟ್ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿದೆ,” ಎಂದು ಆರೋಪಿಸಿದರು.
ಸರ್ಕಾರದ ಒಡೆತನದ ಕಟ್ಟಡವನ್ನು ಖಾಸಗಿ ಟ್ರಸ್ಟ್ — ಪ್ರೆಸ್ ಟ್ರಸ್ಟ್ — ತನ್ನ ಆಸ್ತಿಯಂತೆ ವರ್ತಿಸುತ್ತಿರುವುದಾಗಿ ಅವರು ಆರೋಪಿಸಿದರು. “ಟ್ರಸ್ಟ್ ಅಧ್ಯಕ್ಷ ಮತ್ತು ಕಾರ್ಯದರ್ಶಿ ಕಳೆದ ಹಲವು ವರ್ಷಗಳಿಂದ ಪ್ರೆಸ್ ಮೀಟ್ ಮತ್ತು ಪ್ರೆಸ್ ನೋಟುಗಳ ಹೆಸರಿನಲ್ಲಿ ಹಣ ವಸೂಲಿ ಮಾಡಿ ದುರುಪಯೋಗ ಮಾಡಿದ್ದಾರೆ. ಸುಮಾರು 60 ಲಕ್ಷಕ್ಕೂ ಹೆಚ್ಚು ಹಣದ ದುರ್ಬಳಕೆ ನಡೆದಿದ್ದು, ಇವರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧನ ಕ್ರಮ ಕೈಗೊಳ್ಳಬೇಕು,” ಎಂದು ಅವರು ಒತ್ತಾಯಿಸಿದರು.
ಪತ್ರಿಕಾಭವನದ ನಾಮಫಲಕ, ಕಟ್ಟಡದ ಒಳಗೆ ಅಳವಡಿಸಿರುವ ಟ್ರಸ್ಟ್ ಬೋರ್ಡ್ ತೆರವು, ಖಾಸಗಿ ಟ್ರಸ್ಟ್ ಕಚೇರಿ ತೆರವು ಸೇರಿದಂತೆ ಹಲವು ಬೇಡಿಕೆಗಳನ್ನು ಅವರು ಮಂಡಿಸಿದರು. ಹಾಗೆಯೇ ಪಿಡಬ್ಲ್ಯೂಡಿ ಅಧಿಕಾರಿಗಳ ಭ್ರಷ್ಟಾಚಾರ, ವಾರ್ತಾ ಅಧಿಕಾರಿಯ ನಿರ್ಲಕ್ಷ್ಯ, ಖಾಸಗಿ ಟ್ರಸ್ಟ್‌ಗೆ ಸರ್ಕಾರಿ ಜಾಗ ನೀಡಿದ ಕ್ರಮಗಳ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಧ್ವನಿ ಸಂಘದ ಹಕ್ಕೊತ್ತಾಯಗಳು ಈಡೇರುವವರೆಗೆ ಧರಣಿ ಸತ್ಯಾಗ್ರಹ ಮುಂದುವರೆಯುತ್ತದೆ ಎಂದು ಅವರು ಘೋಷಿಸಿದರು. ಪ್ರತಿಭಟನಾ ಮೆರವಣಿಗೆ ಜಯನಗರ ಪೊಲೀಸ್ ಠಾಣೆಯ ಮುಂಭಾಗದಿಂದ ಪ್ರಾರಂಭವಾಗಿ ಆರ್.ಟಿ.ಓ. ರಸ್ತೆಯ ಸರ್ಕಾರಿ ಪತ್ರಿಕಾ ಭವನದವರೆಗೆ ಸಾಗಲಿದೆ.
ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷ ಚಿತ್ರಪ್ಪ ಯರಬಾಳ, ಪ್ರಧಾನ ಕಾರ್ಯದರ್ಶಿ ಕೆ.ಎಂ. ಸತೀಶ್ ಗೌಡ, ಕಾರ್ಯದರ್ಶಿ ಶಿವರಾಜ್ ಬಿ.ಸಿ., ಸಹ ಕಾರ್ಯದರ್ಶಿ ಕಮಲಾಕ್ಷ ಎಸ್.ಡಿ., ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ, ಖಜಾಂಚಿ ಗಿರೀಶ್ ಬಿ.ಸಿ., ಹಾಗೂ ಕಾರ್ಯಕಾರಿ ಸದಸ್ಯರು ನಂದನ್ ಕುಮಾರ್ ಸಿಂಗ್, ಹೆಚ್.ಎಸ್. ವಿಷ್ಣುಪ್ರಸಾದ್, ಭರದ್ವಾಜ್ ಯು.ಎಸ್., ಡಿ.ಪಿ. ಅರವಿಂದ, ಸುರೇಶ್ ಶೆಟ್ಟಿ ಬಿ.ಎ., ಮಹಮ್ಮದ್ ಫಾರೂಕ್, ಕಾನೂನು ಸಲಹೆಗಾರ ಷಡಕ್ಷರಪ್ಪ ಜಿ.ಆರ್. ಉಪಸ್ಥಿತರಿದ್ದರು.
ಪ್ರಮುಖ ಬೇಡಿಕೆಗಳು:
1. 27 ಅಕ್ಟೋಬರ್ 2025ರಂದು ಸರ್ಕಾರಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗಲಾಟೆ ಸೃಷ್ಟಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
72. ಸರ್ಕಾರದ ನಿಧಿಯಿಂದ ನಿರ್ಮಿತವಾದ ಪತ್ರಿಕಾ ಭವನವನ್ನು “ಸರ್ಕಾರಿ ಪತ್ರಿಕಾ ಭವನ” ಎಂದು ನಾಮಫಲಕ ಅಳವಡಿಸಬೇಕು.
3. ಖಾಸಗಿ ಟ್ರಸ್ಟ್‌ನ ಬೋರ್ಡ್ ಮತ್ತು ಖಾಸಗಿ ಕಚೇರಿಯನ್ನು ಕಟ್ಟಡದಿಂದ ತೆರವುಗೊಳಿಸಬೇಕು.
4. ಕಳೆದ 10 ವರ್ಷಗಳಲ್ಲಿ 60 ಲಕ್ಷಕ್ಕೂ ಅಧಿಕ ಹಣವನ್ನು ಟ್ರಸ್ಟ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದ್ದು, ಆ ಹಣವನ್ನು ಹಿಂತೆಗೆದುಕೊಳ್ಳಬೇಕು ಮತ್ತು ತಕ್ಷಣ ಎಫ್‌ಐಆರ್ ದಾಖಲಿಸಬೇಕು.
5. ರಿನೋವೇಷನ್ ಹೆಸರಿನಲ್ಲಿ PWD ಅಧಿಕಾರಿಗಳು ಮತ್ತು ಟ್ರಸ್ಟ್ ಸದಸ್ಯರು ಸೇರಿ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ತನಿಖೆ ನಡೆಸಬೇಕು.
6. ವಾರ್ತಾ ಇಲಾಖೆಯ ಅಧಿಕಾರಿಯಾದ ಆರ್. ಮಾರುತಿ ಅವರು 16 ವರ್ಷಗಳಿಂದ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುತ್ತಿದ್ದು, ಟ್ರಸ್ಟ್ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಕಾರಣದಿಂದ ಅವರನ್ನು ಅಮಾನತ್ತು ಮಾಡಲು ಬೇಡಿಕೆ.
7. ಸರ್ಕಾರದ ನಿವೇಶನವನ್ನು ದುರುಪಯೋಗ ಮಾಡಿಕೊಂಡಿರುವ ಕಾರಣ, ಖಾಸಗಿ ಟ್ರಸ್ಟ್‌ಗೆ ನೀಡಿರುವ ಕರಾರನ್ನು ರದ್ದುಪಡಿಸಬೇಕು ಎಂದು ಸಂಘ ಆಗ್ರಹಿಸಿದೆ.
8. ಪತ್ರಿಕಾ ಭವನದಲ್ಲಿ ಎಲ್ಲಾ ಪತ್ರಕರ್ತರಿಗೆ ಸಮಾನ ಪ್ರವೇಶ ಕಲ್ಪಿಸಬೇಕು, ಟ್ರಸ್ಟ್ ಅಧ್ಯಕ್ಷರು ಯಾವುದೇ ರೀತಿಯ ಐಡಿ ಕಾರ್ಡ್ ನಿಯಮ ಹೇರಬಾರದು ಎಂದು ಸ್ಪಷ್ಟಪಡಿಸಲಾಗಿದೆ.
ಧ್ವನಿ ಸಂಘಟನೆ ಸರ್ಕಾರಕ್ಕೆ ಬರೆದ ಮನವಿಯಲ್ಲಿ, “ಸರ್ಕಾರದ ಪತ್ರಿಕಾ ಭವನದ ಉಸ್ತುವಾರಿ ಮಾನ್ಯ ರಾಜ್ಯಮಟ್ಟದ ಪತ್ರಕರ್ತರ ಸಂಘಟನೆಗಳಿಗೆ ನೀಡಬೇಕು. ನಾವು ಪ್ರತಿ ತಿಂಗಳು 10 ಸಾವಿರ ರೂ. ಬಾಡಿಗೆ ನೀಡಿ ಸರ್ಕಾರಕ್ಕೆ ಆದಾಯ ನೀಡಲು ಸಿದ್ಧರಿದ್ದೇವೆ,” ಎಂದು ತಿಳಿಸಿದೆ.
ವರದಿ — ಚಂದ್ರೋದಯ ಪತ್ರಿಕೆ



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ