ಇದು ಗುರುವಾಗಿ ಹೆಮ್ಮೆ ಮತ್ತು ಸಂತೋಷದಿಂದ ಹಂಚಿ ಕೊಳ್ಳ ಬೇಕಾದ ಸುದ್ದಿ
ಮೊದಲ ಚಿತ್ರಕ್ಕೇ ಶ್ರೇಷ್ಟ ಹಿನ್ನೆಲೆಗಾಯಕಿ ರಾಜ್ಯ ಪ್ರಶಸ್ತಿಯನ್ನು ಪಡೆದ ಸಹನಾ
ನನ್ನ ಶಿಷ್ಯೆ … ಪ್ರತಿಭಾವಂತ ಗಾಯಕಿ ವಿದುಷಿ ಸಹನಾ.ಎಸ್.ಭಾರದ್ವಾಜ್ ʼದಂಡಿʼ ಚಿತ್ರಕ್ಕೆ ಹಾಡಿದ ʼಮುಗಿಲೆ ಮಾತಾಡುʼ ಗೀತೆಗೆ 2021-22ನೆಯ ಸಾಲಿನ ಶ್ರೇಷ್ಟ ಹಿನ್ನೆಲೆ ಗಾಯಕಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಅನೇಕ ಚಿತ್ರಗೀತೆಗಳ ಕುರಿತ ಪ್ರಾತ್ಯಕ್ಷಿಕೆಯ ಉಪನ್ಯಾಸಗಳಲ್ಲಿ ನನ್ನ ಜೊತೆ ಗಾಯಕಿಯಾಗಿ ನನ್ನ ಚಿಂತನೆಗಳನ್ನು ಕೇಳುಗರಿಗೆ ತಲುಪಿಸುವ ಮಹತ್ವದ ಕಾರ್ಯ ಮಾಡಿದ ಸಹನಾ, ಸದಾ ನನ್ನಿಂದ ಚಿತ್ರಗೀತೆಗಳ ಇತಿಹಾಸವನ್ನು ಬಹಳ ಕುತೂಹಲದಿಂದ ಕೇಳುತ್ತಿದ್ದ, ರಾಗಗಳ ಬಳಕೆಯ ಕುರಿತು ಚರ್ಚಿಸುತ್ತಿದ್ದ ಸಹನ ಈಗ ತಾವೇ ಇತಿಹಾಸವನ್ನು ನಿರ್ಮಿಸಿದ್ದಾರೆ. ಏಕೆಂದರೆ ಇದು ಅವರು ಹಾಡಿದ ಮೊದಲ ಚಿತ್ರಗೀತೆ. ಮೊದಲ ಬಾಲ್‌ಗೇ ಸಿಕ್ಸರ್ ಎತ್ತುವ ಬ್ಯಾಟ್ಸ್ ಮೆನ್ ರೀತಿ ಮಹತ್ವದ ಸಾಧನೆಯನ್ನು ಮಾಡಿದ್ದಾರೆ.
ಸಹನಾ ತಾತ ಪಿ.ಎನ್.ಮಲ್ಹಾರಿ ರಾಯರು ಚಿತ್ರದುರ್ಗದಲ್ಲಿ ಡಿ.ಡಿ.ಪಿ.ಐ ಆಗಿದ್ದರು. ನನ್ನ ದೊಡ್ಡಪ್ಪನ ಆತ್ಮೀಯ ಮಿತ್ರರು. ಅಂದಿನಿಂದಲೂ ಅವರ ಕುಟುಂಬಕ್ಕೂ ನಮ್ಮ ಕುಟುಂಬಕ್ಕೂ ನಿಕಟವಾದ ನಂಟು. ಅವರ ತಾಯಿ ರಮಾ ಸುಬ್ರಹ್ಮಣ್ಯ ಕೂಡ ಸಂಗೀತ ವಿದ್ವಾಂಸರು. ತಂದೆ ಕೆ.ಎಸ್.ಸುಬ್ರಹ್ಮಣ್ಯ ದೂರವಾಣಿ ಇಲಾಖೆಯಲ್ಲಿ ಕೆಲಸ ಮಾಡಿದವರು. ಸಹನಾ ಅಕ್ಕ ಮಾನಸ ವಿನಯ್ ಕೂಡ ಗಾಯಕಿ. ಅಕ್ಕ-ತಂಗಿಯರಿಬ್ಬರೂ ʼಶಿವಮೊಗ್ಗ ಸಿಸ್ಟರ್ಸ್ʼ ಎಂದೇ ಜನಪ್ರಿಯತೆ ಪಡೆದವರು. ಸಹನಾ ಪತಿ ಶರತ್, ಮಡದಿಯ ಪ್ರತಿಭೆಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದವರು. ಸಹನಾ ಬೆಳೆದಿದ್ದು ವಿದ್ಯಾಭ್ಯಾಸ ಪಡೆದಿದ್ದು ಎಲ್ಲವೂ ಮಲೆನಾಡಿನ ಶಿವಮೊಗ್ಗ ಪರಿಸರದಲ್ಲಿ, ವಾಣಿಜ್ಯ ಸ್ನಾತಕೊತ್ತರ ಪದವಿಯನ್ನು ಪಡೆದಿದ್ದು ಕುವೆಂಪು ವಿಶ್ವವಿದ್ಯಾಲಯದಿಂದ.
ಸಹನಾ ಒಂದು ರೀತಿಯಲ್ಲಿ ಬಾಲ ಪ್ರತಿಭೆ, ಮೂರನೆಯ ವರ್ಷದಿಂದಲೇ ಹಾಡಲು ಆರಂಭಿಸಿದವರು! ತಾಯಿಯೇ ಮೊದಲ ಗುರು, ಕರ್ನಾಟಕಿ ಸಂಗೀತದಲ್ಲಿ ಜ್ಯೂನಿಯರ್ ಮತ್ತು ಸೀನಿಯರ್ ಎರಡರಲ್ಲಿಯೂ ಉನ್ನತ ಶ್ರೇಣಿ ಪಡೆದ ಅವಳು ಹಿಂದೂಸ್ತಾನಿಯನ್ನು ಉಸ್ತಾದ್ ಹುಮಾಯೂನ್ ಹರ್ಪಾಪುರ ಅವರಿಂದ ಪಡೆದು ಅಲ್ಲಿಯೂ ಉನ್ನತ ಶ್ರೇಣಿಯಲ್ಲಿ ಸೀನಿಯರ್ ಪದವಿ ಪಡೆದರು. ಪುಷ್ಪ ಕೃಷ್ಣಮೂರ್ತಿಯವರಲ್ಲಿ ಭರತ ನಾಟ್ಯ ಕಲಿತು ಪ್ರೀ ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯನ್ನು ಪಡೆದು ರಂಗ ಪ್ರವೇಶವನ್ನೂ ಮುಗಿಸಿದ್ದಾರೆ. ವಿದುಷಿ ಶುಭಾ ಅವರಲ್ಲಿ ವೀಣಾ ಕಲಿಕೆಯನ್ನು ಆರಂಭಿಸಿ ಶ್ರೀಮತಿ ವೀಣಾ ಅವರಲ್ಲಿ ಹೆಚ್ಚಿನ ಕಲಿಕೆ ಮುಂದುವರೆಸಿದ್ದಾರೆ. ಉತ್ತಮ ನಿರೂಪಕಿ ಕೂಡ ಆಗಿರುವ ಸಹನಾ ಚಂದನಾದಲ್ಲಿ ಅನೇಕ ಕಾರ್ಯಕ್ರಮಗಳನ್ನೂ ನಿರೂಪಿಸಿದ್ದಾರೆ. ಸರಿಗಮಪ ಮತ್ತು ಎದೆ ತುಂಬಿ ಹಾಡುವೆನು ಎರಡೂ ಕಾರ್ಯಕ್ರಮಗಳಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ನಾಡಿನಾದ್ಯಂತ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಜನಮನ ಸೆಳೆದಿರುವುದಲ್ಲದೆ 2018ರಿಂದಲೂ ʼಸುಸ್ವರ ಸ್ಕೂಲ್ ಆಫ್ ಆರ್ಟ್ʼ ಮೂಲಕ ತಮ್ಮ ಬಹುಮುಖ ಪ್ರತಿಭೆಯನ್ನು ಶಿಷ್ಯರಿಗೆ ಹಂಚುತ್ತಿದ್ದಾರೆ.
ಸಹನಾ ಸಂಗೀತವನ್ನು ಆರಾಧಿಸುವವರು, ರಾಗಗಳ ಸೂಕ್ಷ್ಮವನ್ನು ಅರಿತವರು, ಮುಖ್ಯ ಚಿತ್ರಗೀತೆಗಳ ಮೀಮಾಂಸೆಯ ಕುರಿತು ಅಪಾರ ಆಸಕ್ತಿಯನ್ನು ತಳೆದವರು. ಹತ್ತಾರು ವಿಷಯಗಳ ಕುರಿತು ಅವರು ತೋರಿಸುವ ಆಸಕ್ತಿಯಿಂದ ಬೆರಗು ಮೂಡಿಸುವಂತಹದು. ಈ ಪುರಸ್ಕಾರ ಅವರಿಗೆ ಹುಮ್ಮನಸ್ಸು ನೀಡಿ ಮತ್ತಷ್ಟು ಸಾಧನೆಗೆ ನೆರವು ನೀಡಲಿ ಎಂದು ಗುರುವಾಗಿ ನಾನು ಮನಪೂರ್ವಕವಾಗಿ ಹಾರೈಸುತ್ತೇನೆ.
-ಎನ್.ಎಸ್.ಶ್ರೀಧರ ಮೂರ್ತಿ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ