ಕಾಫಿ ಜಗತ್ತಿಗೆ ಪೇಯವಾದರೆ, ಬೆಳೆಗಾರರಿಗೆ ಅನ್ನ : ಕಾಫಿ ದಿನದ ಶುಭಾಶಯಗಳು
ಮೊಟ್ಟಮೊದಲಿಗೆ ಕಾಫಿಯನ್ನು ಭಾರತಕ್ಕೆ ತಂದಿದ್ದು ಅರೇಬಿಯನ್ ಸಂತ ಎಂಬುದಕ್ಕೆ , ಏಳು ಕಾಫಿ ಬೀಜಗಳನ್ನು ಮೆಕ್ಕಾದಿಂದ ತಂದು ನೆಟ್ಟ ಎಂಬ Holy beans ಕಥೆಗೆ ಆಧಾರವಿಲ್ಲ ಎಂದು ಕನ್ನಡದ ಕಾಫಿ ಗ್ರಂಥ ' ಬೆಟ್ಟದಿಂದ ಬಟ್ಟಲಿಗೆ' ಬರೆದ ಹೆಚ್ ಎಲ್ ನಾಗೇಗೌಡರು ಹೇಳುತ್ತಾರಾದರೂ, ಅರೇಬಿಕಾ ತಳಿಗೆ ಆ ಹೆಸರು ಬಂದಿದ್ದು ಅರಬ್ ನ ಯೆಮನ್ ನಿಂದ ಬಂದ ಕಾಫಿಯಿಂದಲೇ ಎನ್ನುವ ವಾದವೂ ಇದೆ. ಕುತೂಹಲಕರ ಸಂಗತಿಯೆಂದರೆ, ಮೊದಲ ಬಾರಿಗೆ ಕಾಫಿ ಬೆಳೆಯ ಪ್ರಯೋಗವಾಗಿದ್ದು ಚಿಕ್ಕಮಗಳೂರಿನಲ್ಲಲ್ಲ, ಬದಲಾಗಿ, ಶಿವಮೊಗ್ಗ ಜಿಲ್ಲೆಯ ನಗರ ದಲ್ಲಿ ಎನ್ನಲಾಗುತ್ತದೆ. ಆದರೆ ಅಲ್ಲಿ ಕಾಫಿಗೆ ಹವಾಮಾನ ಸ್ಪಂದಿಸದೇ ಹೋದುದರಿಂದ ಬ್ರಿಟಿಷರು ಚಿಕ್ಕಮಗಳೂರಿನ ಗಿರಿ ಪ್ರದೇಶದಲ್ಲಿ ಬೆಳೆದು ಯಶಸ್ವಿಯಾದರು ಎನ್ನಲಾಗುತ್ತದೆ.
ಚಿಕ್ಕಮಗಳೂರಿನವರು ಕಾಫಿ ಬೆಳೆದರೂ ಸಹ ರುಚಿಕರ ಕಾಫಿ ಮಾಡುವುದನ್ನು ಕಲಿಸಿದ್ದು ತಮಿಳು ಅಯ್ಯಂಗಾರರು. ಇವತ್ತಿಗೂ ಉತ್ಕೃಷ್ಟ ಫಿಲ್ಟರ್ ಕಾಫಿ ತಯಾರಿಸುವುದರಲ್ಲಿ ಅವರನ್ನು ಬಿಟ್ಟರಿಲ್ಲ.
ಕಾಫಿಯ ಕಹಿ ಹೆಚ್ಚಿಸುವ ಚಿಕೋರಿ ಬೆಳೆಯವುದು ಆಂಧ್ರದಲ್ಲಿ. ನಮ್ಮ ಕಾಫಿ ಬೆಳೆಗಾರರಿಗೆ ಚಿಕೋರಿ ನೋಡಲು ಹೇಗಿರುತ್ತದೆ ಎಂದೇ ಗೊತ್ತಿಲ್ಲ! ಚಿಕೋರಿಯನ್ನು ಕಾಫಿ ನಾಡಿಗೆ ತಂದಿದ್ದು, ನಂತರ ಎಲ್ಲೆಡೆ ಅದನ್ನು ಹರಡಿದ್ದು ಆಂಧ್ರದಿಂದ ವ್ಯಾಪಾರಕ್ಕೆಂದು ಬಂದ ಆರ್ಯ ವೈಶ್ಯರು ಎನ್ನಲಾಗುತ್ತದೆ.
ಪ್ರಸ್ತುತ, ಕಾಫಿಯ ಬೆಲೆಯು ದೊಡ್ಡ ಮಟ್ಟದ ಏರಿಳಿತವನ್ನು ಕಾಣುತ್ತಿದೆಯಾದರೂ, ಈ ಬೆಲೆಯು ಒಂದಷ್ಟು ವರ್ಷಗಳ ಕಾಲ ನಿಂತು ಬೆಳೆಗಾರರನ್ನು ಕಾಪಾಡುತ್ತದೆಂಬ ಯಾವುದೇ ನಂಬಿಕೆಯಿಲ್ಲ. ಜೊತೆಗೆ, ಜಾಗತಿಕ ಹವಾಮಾನ ಬದಲಾವಣೆ, ವಿಪರೀತ ಏರುತ್ತಿರುವ ತಾಪಮಾನವು ಕಾಫಿಯೂ ಸೇರಿದಂತೆ ಎಲ್ಲಾ ರೀತಿಯ ಸಾಂಬಾರ, ತೋಟಗಾರಿಕಾ ಬೆಳೆಗಾರರನ್ನು ಇನ್ನಿಲ್ಲದಂತೆ ಹೈರಾಣಾಗಿಸುವುದಂತೂ ಖಚಿತ. ಈಗಾಗಲೇ ದೊಡ್ಡ ತೋಟಗಳು ಕಾರ್ಮಿಕರ ಕೊರತೆಯಿಂದಾಗಿ ಒಂದೊ ಪಾಳು ಬೀಳುತ್ತಿವೆ ಇಲ್ಲವೇ ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗುತ್ತಿವೆ.
ಚಿಕ್ಕ ತೋಟಗಳನ್ನು ಹೊಂದಿರುವ ಬಹುಸಂಖ್ಯಾತ ಬೆಳೆಗಾರರು ಮೊದಲು ತಮ್ಮ ತೋಟದಿಂದ ಪರಿಸರ ಮಾರಕ ಸಿಲ್ವರ್ ಮರಗಳನ್ನು ಕಿತ್ತೆಸೆದು ಸ್ಥಳೀಯ ಜಾತಿಯ ಕಾಡು ಮರಗಳನ್ನು ಪುನಃ ಬೆಳೆಯುವ ಅವಶ್ಯಕತೆ ತುರ್ತಾಗಿದೆ. ಅಲ್ಲದೇ, ಹಿಂದಿನಂತೆ, ಬಹುಬೆಳೆ ಪದ್ದತಿಯ ಮೊರೆ ಹೋಗದೇ ಹೋದರೆ ಬೆಳೆಗಾರ ಆರ್ಥಿಕವಾಗಿ ಪಾತಾಳಕ್ಕೆ ಕುಸಿಯುವುದು ಖಂಡಿತ.
ಕಾಫಿ ಜಗತ್ತಿಗೆ ಪೇಯವಾದರೆ, ಬೆಳೆಗಾರರಿಗೆ ಅನ್ನ.
ಕಾಫಿ ದಿನದ ಶುಭಾಶಯಗಳು
- ಕಾರ್ತೀಕ್ ಬೆಳಗೋಡು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ