ಮಲೆಮಹದೇಶ್ವರ ವನ್ಯಧಾಮದಲ್ಲಿ ಗಂಧದ ಮರ ಸಾಗಾಟ, ತಮಿಳುನಾಡು ವ್ಯಕ್ತಿಯ ಬಂಧನ
ಹನೂರು: ಮಲೆಮಹದೇಶ್ವರ ವನ್ಯಧಾಮದಲ್ಲಿ ಶ್ರೀಗಂಧದ ಮರ ಕಡಿದು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ದಿನದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಮಿಳುನಾಡಿನ ಇಬ್ಬರನ್ನು ಅರಣ್ಯಾಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
ಪ್ರಕರಣ 1: ಶನಿವಾರ ಬೆಳಿಗ್ಗೆ ಮಲೆಮಹದೇಶ್ವರ ವನ್ಯಧಾಮದ ಕೊಕ್ಬರೆ ಗಸ್ತಿನ ದೊಡ್ಡಬರೆಹಳ್ಳದ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ ಒಬ್ಬ ಬಾಲಕ ಹಾಗೂ ಇಬ್ಬರು ವ್ಯಕ್ತಿಗಳು ಸೇರಿ ಶ್ರೀಗಂಧದ ಮರ ಕಡಿದು ಅದನ್ನು ಎರಡು ತುಂಡುಗಳನ್ನಾಗಿ ಮಾಡುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಬಾಲಕ ಸಿಕ್ಕಿಬಿದ್ದಿದ್ದಾನೆ. ಆತನಿಂದ 62 ಕೆ.ಜಿ ಶ್ರೀಗಂಧದ 02 ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಾಲಕನ ಜೊತೆಗಿದ್ದ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಚಿನ್ನ ಸೆಲಂ ತಾಲ್ಲೂಕಿನ ಪೆರುಮಾಳ್ ಮತ್ತು ಮುರುಗನ್ ಪರಾರಿಯಾಗಿದ್ದು, ಬಾಲಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣ 2: ಮಹದೇಶ್ವರ ವನ್ಯಧಾಮದ ಮಹದೇಶ್ವರ ಬೆಟ್ಟ ವನ್ಯಜೀವಿ ವಲಯದ ಕೊಕ್ಬರೆ ಗಸ್ತಿನ ಆನೆತಲೆದಿಂಬದ ಬಳಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ತಮಿಳುನಾಡಿನ ಸೇಲಂ ಜಿಲ್ಲೆಯ ಆತೂರು ತಾಲ್ಲೂಕಿನ ನೈಯ್ಯಮಲೈ ಗ್ರಾಮದ ಸೆಡೆಯಾನ್ ಎಂಬ ವ್ಯಕ್ತಿಯನ್ನು ಶನಿವಾರ ಸಂಜೆ ಬಂಧಿಸಿದ್ದಾರೆ. ಪಾದಯಾತ್ರೆಯಲ್ಲಿ ಅನುಮಾನಸ್ಪದವಾಗಿ ಬರುತ್ತಿದ್ದ ವ್ಯಕ್ತಿಯನ್ನು ತಡೆದು ತಪಾಸಣೆ ಮಾಡಿದಾಗ ಆತನ ಬ್ಯಾಗಿನಲ್ಲಿ 11.70 ಕೆಜಿ ತೂಕವುಳ್ಳ ಶ್ರೀಗಂಧದ 33 ತುಂಡುಗಳು ಪತ್ತೆಯಾಗಿವೆ. ಆತನನ್ನು ವಶಕ್ಕೆ ಪಡೆದು ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಒಂದೇ ದಿನದಲ್ಲಿ ನಾಲ್ಕು ಜನರು ಕಾಡಿನೊಳಗೆ ಶ್ರೀಗಂಧ ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ಕೃತ್ಯದ ಹಿಂದೆ ತಮಿಳುನಾಡಿನ ಸೇಲಂನಲ್ಲಿ ಒಂದು ತಂಡವೇ ಇದೆ. ಇದು ಹಲವು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿಸಿಕೊಂಡಿದೆ. ಈ ಕೃತ್ಯದಲ್ಲಿ ಪರಿಣತಿ ಇರುವ ವ್ಯಕ್ತಿಗಳನ್ನು ಕಳುಹಿಸಿ ಈ ದಂಧೆ ಮಾಡುತ್ತಿದ್ದಾರೆ. ಶನಿವಾರ ಮಹದೇಶ್ವರ ಬೆಟ್ಟಕ್ಕೆ ಅಮಾವಾಸ್ಯೆ ಪೂಜೆಗೆಂದು ಭಕ್ತರ ವೇಷದಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ ಎಂಬುದು ವಿಚಾರಣೆ ಸಂದರ್ಭದಲ್ಲಿ ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸಿ.ಆರ್ ಅರುಣ್. ಉಪ ವಲಯ ಅರಣ್ಯಾಧಿಕಾರಿ ಮಹಾಂತೇಶ್ ಎಸ್. ಕುಂಬರ, ಧರ್ಮರಾಜ ಗುತ್ತೇದಾರ, ಗಸ್ತು ಅರಣ್ಯ ಪಾಲಕ ಸಿದ್ದರಾಮಣ್ಣ, ಆನೆತಲೆದಿಂಬ ಕಳ್ಳಬೇಟೆ ತಡೆ ಶಿಬಿರದ ಅರಣ್ಯ ರಕ್ಷಕರಾದ ಚಿನ್ನರಾಜು, ಕುಮಾರ ಮತ್ತು ರವಿ ಭಾಗವಹಿಸಿದ್ದರು.
ಪಾಲಾರ್ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ
ತಮಿಳುನಾಡಿನ ಸಾರಿಗೆ ಬಸ್‌ಗಳು ರಾತ್ರಿಯಿಡೀ ಸಂಚರಿಸುತ್ತವೆ. ಇದರಲ್ಲಿ ಬಂದು ರಾತ್ರಿ ವೇಳೆ ರಸ್ತೆ ಮಧ್ಯೆ ಇಳಿದು ಕಾಡಿನೊಳಗೆ ಪ್ರವೇಶಿಸಿ, ನಸುಕಿನ ಸಮಯದಲ್ಲಿ ಗಂಧದ ಮರ ಹುಡುಕಿ ಅದನ್ನು ಕಡಿದು ತುಂಡುಗಳನ್ನಾಗಿ ಮಾಡಿ ಮತ್ತೆ ರಾತ್ರಿ ಅದೇ ಬಸ್‌ನಲ್ಲಿ ತೆರಳುತ್ತಿರುವುದಾಗಿ ಆರೋಪಿ ವಿಚಾರಣೆ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಆದ್ದರಿಂದ ಪಾಲಾರ್ ಚೆಕ್ ಪೋಸ್ಟ್ ನಲ್ಲಿ ಪ್ರತಿ ವಾಹನವನ್ನು ಕಡ್ಡಾಯವಾಗಿ ತಪಾಸಣೆ ಮಾಡುವಂತೆ ಸೂಚಿಸಲಾಗಿದೆ. ಜೊತೆಗೆ ದಂಧೆ ನಡೆಸುತ್ತಿರುವವರ ಬಗ್ಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ತಿಳಿಸಿದ್ದಾರೆ.
- ಬಸವರಾಜ್ , ಹನೂರು
.jpg)
.jpg)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ