ಒಂದು ಗೋವಿನ ವೀರಮರಣ ಶಾಸನ : ರಮೇಶ್ ಹಿರೇಜಾಂಬುರ್


ಕರ್ನಾಟಕದ ಇತಿಹಾಸದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಗೋವುಗಳ ರಕ್ಷಣೆಗಾಗಿ ತಮ್ಮ ಪ್ರಾಣ ಕಳೆದುಕೊಂಡು ವೀರ ಸ್ವರ್ಗ ಸೇರಿದ ಮಹಾ ವೀರರ ಶಾಸನ ಸಾಹಿತ್ಯ ಇಂದಿಗೂ ಹೇರಳವಾಗಿ ದೊರೆಯುತ್ತದೆ. ಗೋವುಗಳನ್ನು ಶಾಸನಗಳಲ್ಲಿ ತುರುಗಳು , ಕವಿಲೆ ಎಂಬ ಹೆಸರಿನಿಂದ ಕರೆಯಲಾಗಿದ್ದು, ಇತಿಹಾಸ ಅಧ್ಯಯನದಲ್ಲಿ ಗೋರಕ್ಷಣೆ ಕುರಿತಾದ ಶಾಸನಗಳಿಗೆ ತುರುಗೋಳ್ ಶಾಸನ ಎಂದು ಕರೆಯಲಾಗಿದೆ.

 ಗೋಗ್ರಹಣ ಎಂಬ ಪದ ಹಾಗೂ ವಿಚಾರವನ್ನು ಮಹಾಭಾರತದ ವಿರಾಟಪರ್ವದಲ್ಲಿ ಪ್ರಸ್ತಾಪವಾಗಿದೆ. ಉತ್ತರಕುಮಾರ ಮತ್ತು ಬೃಹನ್ನಳೆ (ಅರ್ಜುನ)ಯರ ಸನ್ನಿವೇಶ ನೆನಪಾಗುತ್ತದೆ. ಗೋಗ್ರಹಣ ಅಥವಾ ತುರುಕಾಳಗವು ಪ್ರಮುಖವಾಗಿ ಎರಡು ಕಾರಣಗಳಿಗಾಗಿ ನಡೆದಿರುತ್ತದೆ. ರಾಜಕೀಯ ಕಾರಣ ಹಾಗೂ ಕೇವಲ ಕಳ್ಳತನಕ್ಕಾಗಿ ನಡೆದ ಕದನವಾಗಿದೆ. 

ಗೋವುಗಳು ಒಂದು ಪ್ರದೇಶದ ಜೀವಧನವಾಗಿದ್ದು ಸಂಪತ್ತಿನ ಪ್ರತಿರೂಪವಾಗಿದ್ದವು. ಅವುಗಳನ್ನು ಅಪಹರಿಸಿ ತರುವುದು ಅಪಹರಿಸುವ ಅರಸರು ಅಥವಾ ನಾಯಕರಿಗೆ ಪ್ರತಿಷ್ಠೆಯ ವಿಷಯವಾಗಿತ್ತು. ಹಾಗೆಯೇ ಅಪಹರಿಸಲು ಬಂದವರನ್ನು ಸೆದೆ ಬಡಿದು ಗೋವುಗಳನ್ನು ಬಿಡಿಸಿ ರಕ್ಷಿಸುವುದೂ ವೀರತನವಾಗಿತ್ತು, ಇದಲ್ಲದೆ ಕೆಲವರು ಕಳ್ಳತನ ಮಾಡಿ ವಯಕ್ತಿಕವಾಗಿ ಸಿರಿವಂತರಾಗಲು ಗೋವುಗಳನ್ನು ಅಪಹರಿಸಲು ಮುಂದಾಗುತ್ತಿದ್ದರು. ಇಂತಹ ಸಂದರ್ಭಗಳಲ್ಲಿಯೂ ಗೋವುಗಳನ್ನು ರಕ್ಷಿಸಲು ವೀರರು ತಮ್ಮ ಪ್ರಾಣ ಕೊಡಲು ಹಿಂಜರಿಯುತ್ತಿರಲಿಲ್ಲ.

ಇಂತಹ ಸಾವಿರ ಸಾವಿರ ತುರುಕಾಳಗಗಳು ಕರ್ನಾಟಕದ ಬಹುಭಾಗದಲ್ಲಿ ಕಂಡುಬರುತ್ತವೆ. ಕಾಳಗದಲ್ಲಿ ಹೋರಾಡಿ ಗೋವುಗಳನ್ನು ರಕ್ಷಿಸಿದ ವೀರನ ನೆನಪಿಗೆ ಒಂದು ವೀರಗಲ್ಲನ್ನು ವೀರನ ಸಂಬಂಧಿಗಳು ಆಥವಾ ನಾಯಕರು ನಡುತ್ತಿದ್ದರು. ತುರುಕಾಳಗದ ವೀರಗಲ್ಲುಗಳ ಕೆಳ ಪಟ್ಟಿಯಲ್ಲಿ ಗುಂಪು ಗುಂಪಾದ ಗೋವುಗಳ ಚಿತ್ರಗಳು ಇದ್ದು ಅವುಗಳ ಮುಂದೆ ವೀರ / ವೀರರು ಶತ್ರುಗಳೊಡನೆ ಹೋರಾಡುವ ಚಿತ್ರ ಇರುತ್ತದೆ. ಆದರ ಮೇಲಿನ ಪಟ್ಟಿಕೆಯಲ್ಲಿ ಮಡಿದ ವೀರನನ್ನು ದೇವಲೋಕದ ಅಪ್ಸರೆಯರು ಪಲ್ಲಕ್ಕಿ ಅಥವಾ ತಮ್ಮ ಭುಜಗಳನ್ನು ಬಳಸಿ ದೇವಲೋಕಕ್ಕೆ ಕರೆದೊಯ್ಯುವ ಚಿತ್ರಣವಿರುತ್ತದೆ. ಮೇಲಿನ ಭಾಗದಲ್ಲಿ ಮೃತ ವೀರನು ಸ್ವರ್ಗ ಅಥವಾ ದೇವಲೋಕದಲ್ಲಿ ಶಿವಪೂಜೆಯಲ್ಲಿ ಉಪಸ್ಥಿತ ಇರುವ ಚಿತ್ರವಿರುತ್ತದೆ. 

ಇಂತಹ ತುರುಕಾಳಗದ ಅನೇಕ ವೀರಗಲ್ಲುಗಳಲ್ಲಿ  ಕಾಳಗದ ಅವಧಿ, ಅಥವಾ ಆ ಅವಧಿಯಲ್ಲಿ ಆಳುತ್ತಿದ್ದ ಅರಸರ , ಹೋರಾಡಿ ಮಡಿದ ವೀರರ ಮತ್ತು ಕಲ್ಲು ನೆಟ್ಟವರ ಮಾಹಿತಿ ಇರುತ್ತದೆ. ಜೊತೆಗೆ ಆತ ಮರಣಿಸಿದ ನಂತರ ಆತನ ಕುಟುಂಬಕ್ಕೆ ಹಲವು ವಿಧವಾದ ದಾನಗಳನ್ನು ನಾಯಕರು ಅಥವಾ ವಿದ್ವಾoಸರು ನೀಡಿದ ಮಾಹಿತಿಗಳು ಸಿಗುತ್ತವೆ. ಕೆಲವುಗಳಲ್ಲಿ ವೀರನ ಹೋರಾಟದ ದೃಶ್ಯಗಳನ್ನು ಅದ್ಭುತವಾಗಿ ಅಲಂಕಾರ ಬಳಸಿ ವರ್ಣಿಸಲಾಗಿರುತ್ತದೆ.

ಕೊನೆಯಲ್ಲಿ ಈ ಕೆಳಗಿನ ಸಾಲುಗಳು ಸಾಮಾನ್ಯವಾಗಿ ಕಂಡುಬರುತ್ತವೆ.


"ಜಿತೇನ ಲಭ್ಯತೇ ಲಕ್ಷ್ಮೀ : ಮೃತೇನಾಪಿ ಸುರಂಗನಾ |

ಕ್ಷಣವಿದ್ವಂಸಿನಿ ಕಾಯೇ ಕಾ ಚಿಂತಾ ಮರಣೆೇ ರಣೆೇ || "


ಜಯಶಾಲಿ ಆದರೆ ಲಷ್ಮೀ ಲಭಿಸುತ್ತಾಳೆ.ಮೃತನಾದರೆ ಸುರಾಂಗನೆಯರು. ಕ್ಷಣಾರ್ಧದಲಿ ನಾಶವಾಗುವ ಈ ದೇಹಕ್ಕೆ ಕಾಳಗದಲ್ಲಿ ಅಳಿವೆನೆಂಬ ಕೊರಗೇಕೆ?

ಇಂತಹ ಮಹಾ ದ್ಯೇಯದೊಂದಿಗೆ ಹೋರಾಟಕ್ಕೆ ದುಮುಕಿ ಆಸಾಮಾನ್ಯ ವೀರರು ಹಸುಗಳನ್ನು ರಕ್ಷಿಸುತ್ತಿದ್ದರು. 

 ಗೋವುಗಳ ರಕ್ಷಣೆಗಾಗಿ ಇಂತಹ ವೀರ ಸಾವನ್ನು ಪಡೆದ ಸಾವಿರಾರು ವೀರರ ವೀರಗಲ್ಲುಗಳು ಇಂದು ಅನೇಕ ಗ್ರಾಮಗಳ ಹಳೆಯ ದೇವಾಲಯದ ಎದುರಲ್ಲಿ ಅಥವಾ 

ಊರ ಅಗಸೆಯ ಬಾಗಿಲ ಬಳಿ , ಕೆರೆಯ ಏರಿಯ ಮೇಲೆ ಇಂದಿಗೂ (ಸೂರ್ಯ -ಚಂದ್ರ ಇರುವವರೆಗೂ ಇರಬೇಕೆಂಬ ಆಶಯ ಆದನ್ನು ನೆಟ್ಟವರಿಗೆ ಇದ್ದು, ಅದಕ್ಕಾಗಿಯೇ ವೀರಗಲ್ಲಿನ ಮೇಲೆ ಸೂರ್ಯ ಮತ್ತು ಚಂದ್ರರ ಚಿತ್ರ ಬಿಡಿಸಲಾಗಿರುತ್ತದೆ) ಕಂಡುಬರುತ್ತವೆ. ಇಂತಹ ವೀರರಲ್ಲಿ ಕೆಲವು ಮಹಿಳೆಯರೂ ಇದ್ದಾರೆ. 

ಆದರೆ ಇಂದು ಗೋರಕ್ಷಣೆ ಎಂದು ಹೇಳುವವರು ತಮ್ಮ ತಮ್ಮ  ಊರುಗಳಲ್ಲಿರುವ "ತುರುಗೋಳ್ " ಶಾಸನಗಳನ್ನು ರಕ್ಷಿಸುವ ಮತ್ತು ಆ ಕುರಿತು  ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ.

(ಚಿತ್ರ: ಹಿರೇಜಂಬೂರಿನ ತುರು ಕಾಳಗ : ಇದರಲ್ಲಿ ಒಟ್ಟು ಎಂಟು ವೀರರು ಗೋವುಗಳ ರಕ್ಷಣೆಯಲ್ಲಿ ಮಡಿದಿದ್ದಾರೆ. 

ವಿಶೇಷ ಎಂಬಂತೆ ಒಂದು ಗೋವು ವೀರಮರಣ ಹೊಂದಿದೆ)

ಶಾಸನ ಪಠ್ಯ ತೃಟಿತವಾಗಿದೆ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ