ಬಂಗಾರಪ್ಪನವರ ಆದರ್ಶ ಮಧು

ಹುಟ್ಟು ಹಬ್ಬದ ಶುಭಾಶಯಗಳು ಮಾನ್ಯ ಸಚಿವರಾದ ಮಧು ಬಂಗಾರಪ್ಪ ಅವರಿಗೆ


    ಒಂದಿಷ್ಟು ಪ್ರೀತಿ, ಸ್ನೇಹ, ಕರುಣೆ, ನಿಷ್ಠೂರತೆ, ಸಿಡುಕುತನ, ರುಚಿಗೆ ತಕ್ಕಷ್ಟು ಜಂಭ ಇವುಗಳ ಒಟ್ಟು ಮೊತ್ತವೇ ಸಚಿವ ಮಧು ಬಂಗಾರಪ್ಪ. 

ಮಧು ಬಂಗಾರಪ್ಪ ಎಂಬ ಸೊರಬದ ಶಾಸಕ ಬಂಗಾರಪ್ಪನವರ ಉತ್ತರಾಧಿಕಾರಿಯಾಗಿ ತಂದೆಯ ನೆರಳಿನಲ್ಲಿಯೇ ಬೆಳೆಯುತ್ತಿದ್ದಾರೆ. ತಂದೆಯಂತೆಯೇ ರಾಜಕೀಯ ಪಟ್ಟುಗಳನ್ನು ಕಲಿಯುತ್ತಾ ಸಾಗುತ್ತಿರುವ ಮಧು ತಂದೆಗೆ ತಕ್ಕ ಮಗನಾಗಿದ್ದಾರೆ.

ಯಾವುದೇ ಸಮಾರಂಭವಿರಲಿ, ಪತ್ರಿಕಾಗೋಷ್ಠಿಗಳಿರಲಿ, ಚುನಾವಣಾ ಭಾಷಣಗಳೇ ಇರಲಿ, ಅಲ್ಲೆಲ್ಲಾ ತಂದೆಯ ಸಾಧನೆಗಳನ್ನು ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಬಂಗಾರಪ್ಪನವರ ಅಸ್ತಿತ್ವನ್ನು ಉಳಿಸಿಕೊಳ್ಳುತ್ತಾ, ಜೊತೆಗೆ ತಮ್ಮ ಅಸ್ತಿತ್ವವನ್ನು ಬೆಳೆಸಿಕೊಳ್ಳುತ್ತಿದ್ದಾರೆ.

ಮಧು ಬಂಗಾರಪ್ಪ ಬಹುಶಃ ಸಿನಿಮಾ ಕ್ಷೇತ್ರದಲ್ಲೇ ಉಳಿದುಕೊಂಡಿದ್ದರೆ, ಉದ್ಯಮಿಯಾಗಿ ಮತ್ತಷ್ಟು ಯಶಸ್ವಿಯಾಗುತ್ತಿದ್ದರೋ ಏನೋ? ಆದರೆ, ಆಡಿಯೋ ಕ್ಯಾಸೆಟ್ ಯುಗ ಮುಗಿದ ಮೇಲೆ ರಾಜಕಾರಣವೆಂಬ ವಿಡಿಯೋ ತಂತ್ರಜ್ಞಾನಕ್ಕೆ ಕಾಲಿಟ್ಟ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮೇಲೆ ಸೊರಬ ಕ್ಷೇತ್ರದಿಂದ ಗೆದ್ದು ಶಾಸಕರಾಗಿ ಆಯ್ಕೆಯೂ ಆಗಿ ಸಚಿವರೂ ಆಗಿದ್ದು, ಅವರ ತಂದೆಯ ಆಶೀರ್ವಾದವೇ ಕಾರಣ ಎಂದು ಹೇಳಬಹುದು. ಪ್ರಾಥಮಿಕ ಶಿಕ್ಷಣ ಸಚಿವರಾದ ಮೇಲೆ ಅವರು ಇಡೀ ರಾಜ್ಯದ ಶಾಲೆಗಳ ಸ್ಥಿತಿಗತಿಗಳನ್ನು ಗಮನಿಸುವುದು ಅನಿವಾರ್ಯವಾಗಿತ್ತು. ಬಹುಶಃ ಎಲ್ಲಾ ಇಲಾಖೆಗಳಿಗಿಂತಲೂ ಶಿಕ್ಷಣ ಇಲಾಖೆ ಅತಿ ಮಹತ್ವವಾದುದು. ಹಾಗಾಗಿಯೇ  ಬಜೆಟ್ ನಲ್ಲಿ ಈ ಕ್ಷೇತ್ರಕ್ಕೆ ಹೆಚ್ಚು ಹಣವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಅದನ್ನು ಹೆಮ್ಮೆಯಿಂದಲೇ ಹೇಳಿಕೊಳ್ಳುವ ಸಚಿವರು  ಶಿಕ್ಷಣ ಇಲಾಖೆಯ ಬಗ್ಗೆ ಆಸಕ್ತಿ ವಹಿಸಿರುವುದಂತೂ ನಿಜ. ಸುಮಾರು 14 ಸಾವಿರ ಶಿಕ್ಷಕರ ನೇಮಕ, ಮಕ್ಕಳಿಗೆ ಮೊಟ್ಟೆ ವಿತರಣೆ, ಉದ್ಯಮಿ ಅಜೀಂ ಪ್ರೇಮ್ ಜೀ ಜೊತೆ ವಿಶ್ವಾಸ ಬೆಳೆಸಿಕೊಂಡು ಅವರಿಂದ ಅನುದಾನ ಬಳಸಿಕೊಂಡು ಶೈಕ್ಷಣಿಕ ಮೌಲ್ಯವರ್ಧನೆಗೆ ಕ್ರಮ, ಕೆ.ಪಿ.ಎಸ್. ಶಾಲೆಗಳ ತೆರೆಯುವುದು, ಶಾಲೆಗಳ ಕೊಠಡಿಗಳ ದುರಸ್ತಿ, ಪರೀಕ್ಷೆಯ ಪದ್ಧತಿಯಲ್ಲಿ ಬದಲಾವಣೆ ತರುವುದು, ಮುಖ್ಯವಾಗಿ ಪಠ್ಯಪುಸ್ತಕದಲ್ಲಿನ ಕೇಸರೀತನ ತೆಗೆದು ಹಾಕಿರುವುದು, ಪಠ್ಯ ಚಟುವಟಿಕೆಗಳಿಗೆ ಒತ್ತು ಕೊಟ್ಟಂತೆ ಪಠ್ಯೆತರ ಚಟುವಟಿಕೆಗೂ ಒತ್ತು ಕೊಡುವುದು, ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ. ಆರಂಭಿಸುವುದು,  ಕನ್ನಡ ಭಾಷೆಯ ಜೊತೆಗೆ ಇಂಗ್ಲಿಷ್ ಗೂ ಒತ್ತು ಕೊಡುವುದು, ಫಲಿತಾಂಶದಲ್ಲಿ ಸಾಧನೆ ಮಾಡಿರುವುದು, ಇವೆಲ್ಲವೂ ಮಧು ಅವರ ಕೊಡುಗೆಗಳೇ ಆಗಿವೆ. ಬಹುಶಃ ಅವರು  ಶಿಕ್ಷಣ ಕ್ಷೇತ್ರವನ್ನು ಒಂದು ಸುವರ್ಣಯುಗಕ್ಕೆ ತೆಗೆದುಕೊಂಡು ಹೋಗಬೇಕೆನ್ನುವ ಭವ್ಯ ಕನಸನ್ನು ಕಂಡಿರುವುದಂತೂ ನಿಜ. 

ಇನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಅನೇಕ ಸಮಸ್ಯೆಗಳ ಬಗ್ಗೆ ಗಮನಸೆಳೆಯುತ್ತಿರುವುದು ಕಂಡು ಬರುತ್ತದೆ. ಮುಖ್ಯವಾಗಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಅನೇಕ ಸಭೆಗಳನ್ನು ನಡೆಸಿ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಮತ್ತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಳ್ಳುವ ಕೆಲಸವನ್ನು ಅವರು ಮಾಡಿದ್ದಾರೆ.

ಇಷ್ಟರ ನಡುವೆಯೂ  ಕನ್ನಡ ಬರುವುದಿಲ್ಲ, ಶಿಕ್ಷಣ ಸಚಿವರಾಗಿ ಅವರಿಗೆ ಅನುಭವವಿಲ್ಲ. ಮಧುವಿಗೆ ಸ್ವಲ್ಪ ಜಂಭ ಹೆಚ್ಚು ಎನ್ನುವ ಟೀಕೆಗಳನ್ನೂ ಕೂಡ ಸಹೃದಯವಾಗಿ ಸ್ವೀಕರಿಸುತ್ತಾ ಬಿಜೆಪಿ ನಾಯಕರುಗಳ ಜೊತೆ ಅತ್ಯಂತ ಸ್ನೇಹದಿಂದ ವರ್ತಿಸುವ ಮಧು ಬಂಗಾರಪ್ಪ ತಂದೆಯ ದೃಷ್ಟಿಕೋನಗಳನ್ನೇ ಬಳಸಿಕೊಂಡಿದ್ದಾರೆ. 

ಮಧು ಬಂಗಾರಪ್ಪ ರಾಜ್ಯದ ಹಿಂದುಳಿದ ವರ್ಗಗಳ ನಾಯಕರಾಗುವ ಎಲ್ಲಾ ಅರ್ಹತೆಗಳು ಅವರಿಗೆ ಇವೆ. ಆದರೆ, ಅದನ್ನು ಸಮರ್ಥವಾಗಿ ಬೆಳೆಸಿಕೊಳ್ಳಬೇಕಾಗಿದೆ. ಹಿಂದುಳಿದ ವರ್ಗಕ್ಕೆ ಸಮರ್ಥ ನಾಯಕನ ಅವಶ್ಯಕತೆಯೂ ಈಗ ಇದೆ. ಮಧು ಈ ನಿಟ್ಟಿನತ್ತ ಪ್ರಜ್ಞಾಪೂರ್ವಕವಾಗಿ ಯೋಚಿಸಬೇಕಾಗಿದೆ. ಅವರ ತಂದೆಯೇ ಅವರಿಗೆ ಮಾರ್ಗದರ್ಶಕರೂ ಆಗಿದ್ದಾರೆ. ಅವರ ಆದರ್ಶಗಳನ್ನು ಬೆಳೆಸಿಕೊಳ್ಳುತ್ತಿರುವ ಅವರ ರಾಜಕೀಯ ಬದುಕು ಮತ್ತಷ್ಟು ವಿಸ್ತರಿಸಲಿ. ಮುಖ್ಯವಾಗಿ ಜನರ ಪ್ರೀತಿ ಗಳಿಸಲಿ. ತಾಳ್ಮೆ ಮತ್ತಷ್ಟು ಹೆಚ್ಚಲಿ. ತಂದೆಯಂತೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸ್ಟಾರ್ ಆಗಲಿ ಎಂಬುದೇ ನಮ್ಮ ಆಶಯ. 

- ಆರುಂಡಿ ಶ್ರೀನಿವಾಸ್

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ